×
Ad

ಡಿವೈಎಫ್‌ಐನಿಂದ ದಿಢೀರ್ ಪ್ರತಿಭಟನೆ- ಬಂಧನ ಬಿಡುಗಡೆ

Update: 2016-01-04 15:22 IST

ಮಂಗಳೂರು: ನಗರದ ಪಾಂಡೇಶ್ವರದ ಮೆಸ್ಕಾಂ ಕಚೇರಿ ಬಳಿ ಕಾರ್ಯ ನಿರ್ವಹಿಸುತ್ತಿರುವ ಸಮೃದ್ಧಿ ಜೀವನ್ ಮಲ್ಟಿ ಸ್ಟೇಟ್ ಮಲ್ಟಿ ಕಾಪೊರೇಟಿವ್ ಸೊಸೈಟಿ ಜನರಿಂದ ಅಕ್ರಮವಾಗಿ ವಿವಿಧ ಯೋಜನೆ, ಉಳಿತಾಯದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಇಂದು ಡಿವೈಎಫ್‌ಐ ಮಂಗಳೂರು ಘಟಕದಿಂದ ದಿಢೀರ್ ಪ್ರತಿಭಟನೆ ನಡೆಯಿತು.

ಕುರಿ, ಆಡು ಸಾಕಾಣಿಕೆ, ಪಿಗ್ಮಿ ಹೆಸರಿನಲ್ಲಿ ಒರಿಸ್ಸಾ ಮೂಲದ ಈ ಸಂಸ್ಥೆಯು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದು, ರಾಜ್ಯ ಸರಕಾರದಿಂದ ಯಾವುದೇ ರೀತಿಯ ಪರವಾನಿಗೆಯನ್ನು ಹೊಂದಿಲ್ಲವಾಗಿದೆ. ಈ ಬಗ್ಗೆ ಸಂಘಟನೆಯು ಕಳೆದ ವರ್ಷವೇ ಪೊಲೀಸರಿಗೆ ದೂರು ನೀಡಿ, ಪ್ರತಿಭಟನೆಯನ್ನೂ ನಡೆಸಿತ್ತು. ಈ ನಡುವೆ, ಸಂಸ್ಥೆಯು ಅಕ್ರಮವಾಗಿ ಹಣ ಸಂಗ್ರಹಿಸುತ್ತಿದೆ ಎಂದು ಒರಿಸ್ಸಾ ಸರಕಾರಕ್ಕೆ ಆರ್‌ಬಿಐ ಪತ್ರವನ್ನೂ ಬರೆದಿದೆ.

ಒರಿಸ್ಸಾದಲ್ಲಿ ನಿನ್ನೆ ಮಹೇಶ್ ಎಂಬಾತನನ್ನು ಈ ಬಗ್ಗೆ ಬಂಧಿಸಲಾಗಿದೆ ಎಂದು ಪ್ರತಿಭಟನೆಯ ವೇಳೆ ಡಿವೈಎಫ್‌ಐ ನಾಯಕ ಸಂತೋಷ್ ಬಜಾಲ್ ತಿಳಿಸಿದರು. ಸಂಸ್ಥೆಯು ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಂದ ಹಣ ಸಂಗ್ರಹ ಕಾರ್ಯವನ್ನು ಕೈಬಿಡುವಂತೆ ಮಂಗಳೂರಿನ ಸಂಸ್ಥೆಯ ಕಚೇರಿಗೆ ಇಂದು ಮಾತುಕತೆಗಾಗಿ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಲು ಡಿವೈಎಫ್‌ಐ ನಿಯೋಗ ತೆರಳಿತ್ತು. ಆದರೆ ಸಂಸ್ಥೆಯ ಕಚೇರಿ ಒಳಗೆ ಹೋಗಲು ಅವಕಾಶ ನೀಡದ ಕಾರಣ ದಿಢೀರ್ ಪ್ರತಿಭಟನೆ ನಡೆಸಲಾಯಿತು ಎಂದು ಸಂತೋಷ್ ಬಜಾಲ್ ತಿಳಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಡಿವೈಎಫ್‌ಐನ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ಸಾದಿಕ್ ಕಣ್ಣೂರು, ರಿಯಾಝ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News