ಪಠಾಣ್‌ಕೋಟ್‌ನಲ್ಲಿ ಉಗ್ರರನ್ನು ಸದೆಬಡಿದ ಯೋಧರು;ದಾಳಿಯ ಹೊಣೆಹೊತ್ತ " ಹೈವೇ ಸ್ಕ್ವಾಡ್ ";
ಶ್ರೀನಗರ, ಜ.5: ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ವಾಯುನೆಲೆಗೆ ಲಗ್ಗೆಯಿಟ್ಟ ಎಲ್ಲ ಉಗ್ರರನ್ನು ಕೊಂದು ಹಾಕುವ ಮೂಲಕ ಉಗ್ರರ ಯೋಜನೆಯನ್ನು ವಿಫಲಗೊಳಿಸಿರುವ ರಾಷ್ಟ್ರೀಯ ಭದ್ರತಾ ಪಡೆ ಕಾರ್ಯಾಚರಣೆಯನ್ನು ಇನ್ನೂ ನಿಲ್ಲಿಸಿಲ್ಲ. ವಾಯುನೆಲೆಯಲ್ಲಿ ಉಗ್ರರ ಸದ್ದಡಗಿದೆ. ಸೈನಿಕರ ಗುಂಡಿನ ಸದ್ದು ಮಾತ್ರ ಕೇಳಿ ಬರುತ್ತಿದೆ.
ವಾಯುನೆಲೆ, ಫೈಟರ್‌ಜೆಟ್‌ನ್ನು ಸ್ಫೋಟಿಸುವ ಉದ್ದೇಶದೊಂದಿಗೆ ಪಠಾಣ್‌ಕೋಟ್ ಪ್ರವೇಶಿಸಿದ್ದ ಉಗ್ರರಿಗೆ ಏನನ್ನು ಮಾಡಲು ಸಾಧ್ಯವಾಗಿಲ್ಲ. ಇದೀಗ ಪಾಕಿಸ್ತಾನ ಮೂಲದ ಯುನೈಟೆಡ್ ಜಿಯಾದ್ ಕೌನ್ಸಿಲ್ (ಯುಜೆಸಿ) ತನ್ನ ಮಾರ್ಗದರ್ಶನದಲ್ಲಿ ಹೈವೇ ಸ್ಕ್ವಾಡ್ ದಾಳಿ ನಡೆಸಿರುವುದಾಗಿ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಯುಜೆಸಿ ಪಾಕ್ ಬೆಂಬಲಿತ ಕಾಶ್ಮೀರ ಭಯೋತ್ಪಾದಕರ ಸಂಘಟನೆಯಾಗಿದೆ.ಭಯೋತ್ಪಾದಕ ಸೈಯದ್ ಸಲಾವುದ್ದೀನ್ ಈ ಸಂಘಟನೆಯ ನಾಯಕ.
ಮೂರನೆ ದಿನ ಮುಂದುವರಿದ ಕಾರ್ಯಾಚರಣೆಯಲ್ಲಿ ಇನ್ನಿಬ್ಬರು ಉಗ್ರರನ್ನು ಭದ್ರತಾ ಪಡೆ ಕೊಂದು ಹಾಕಿದೆ. ಎರಡು ತಂಡಗಳಲ್ಲಿ ಉಗ್ರರು ವಾಯುನೆಲೆ ಪ್ರವೇಶಿಸಿದ್ದರು. ಒಂದು ತಂಡದಲ್ಲಿ ನಾಲ್ವರು ಮತ್ತು ಇನ್ನೊಂದು ತಂಡದಲ್ಲಿ ಇಬ್ಬರು ಉಗ್ರರು ಇದ್ದರೆಂದು ಹೇಳಲಾಗಿದೆ..