ಪಾಲಡ್ಕ ಅನುದಾನಿತ ಶಾಲೆಯ ಶತಮಾನೋತ್ಸವ
ಮೂಡುಬಿದಿರೆ, ಜ.4: ಶಿಕ್ಷಣವು ಪ್ರತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕ್ರಿಶ್ಚಿಯನ್ ಮಿಷನರಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರಿಂದಲೆ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಕೆಥೊಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷ, ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು. ಮೂಡುಬಿದಿರೆ ಸಮೀಪದ ಪಾಲಡ್ಕ ಸಂತ ಇಗ್ನೇಶಿಯಸ್ ಅನುದಾನಿತ ಹಿ.ಪ್ರಾ. ಶಾಲೆಯ ಶತಮಾನೋತ್ಸವದ ಅಂಗವಾಗಿ ಶತಮಾನೋತ್ಸವ ಸ್ಮಾರಕ ಕಟ್ಟಡ ಮತ್ತು ಇತರ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪಾಲಡ್ಕ ಗ್ರಾಪಂ ಅಧ್ಯಕ್ಷೆ ಸವಿತಾ, ಮೂಡುಬಿದಿರೆ ವಲಯದ ಮುಖ್ಯಗುರು ಅಸ್ಟಿನ್ ಪೀಟರ್ ಪೇರಿಸ್, ಯು.ಎಮ್.ಐ ಮುಖ್ಯಸ್ಥ ಧರ್ಮಭವನಿ ಕುಸುಮ್, ಕೆಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ.ಜೆರಾಲ್ಡ್ ಡಿಸೋಜ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ ಡೆನಿಸ್ ಡಿಮೆಲ್ಲೊ, ಕಾರ್ಯದರ್ಶಿ ವಿನ್ಸೆಂಟ್ ಪಿಂಟೋ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ರೆ.ಪಾ. ಐವನ್ ಎಮ್. ರೊಡ್ರಿಗಸ್ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಜೊಸಿನಾ ವರದಿ ವಾಚಿಸಿದರು. ನಿವೃತ್ತ ಶಿಕ್ಷಕ ಆ್ಯಂಡ್ರೂ ಡಿಸೋಜ ಮತ್ತು ಮೆಟಿಲ್ಡಾ ಖರ್ಡೋಜಾ ಕಾರ್ಯಕ್ರಮ ನಿರೂಪಿಸಿದರು.