×
Ad

ಸುಳ್ಯ ತಾಪಂ ಸಭೆಯಲ್ಲಿ ಪ್ರತಿಧ್ವನಿಸಿದ ಬೆಂಡೋಡಿ ಸೇತುವೆ ವಿಚಾರ

Update: 2016-01-04 23:59 IST

ಸುಳ್ಯ, ಜ.4: ಕೆಲವು ದಿನಗಳ ಹಿಂದಷ್ಟೇ ಶಂಕುಸ್ಥಾಪನೆ ನಡೆದ ಬಳಿಕ ಶಾಸಕ ಎಸ್.ಅಂಗಾರ ಮತ್ತು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾದ ಬೆಂಡೋಡಿ ಸೇತುವೆ ವಿಚಾರ ತಾಪಂ ಸಭೆಯಲ್ಲೂ ತೀವ್ರ ಚರ್ಚೆ, ಮಾತಿನ ಚಕಮಕಿಗೆ ಕಾರಣವಾಯಿತು.

ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯಪ್ರಸನ್ನ, ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಮತ್ತಿತರರು ಇದ್ದರು.

ಸಭೆಯ ಕೊನೆಗೆ ವಿಷಯ ಪ್ರಸ್ತಾಪಿಸಿದ ಮುಳಿಯ ಕೇಶವ ಭಟ್, ಬೆಂಡೋಡಿ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಆಯೋ ಜಿಸಿದ್ದು ಯಾರು? ಈ ಅನುದಾನಕ್ಕೆ ಪ್ರಸ್ತಾಪ ಕಳುಹಿಸಿದವರು ಯಾರು ಎಂದು ಅಧಿಕಾರಿಗಳು ಬಹಿರಂಗಪಡಿಸಬೇಕು. ಕೆಲವು ಸ್ಥಾಪಿತ ಹಿತಾಸಕ್ತಿಗಳು ನಮ್ಮ ಶಾಸಕರಿಗೆ ಸವಾಲು ಹಾಕುವಂತಹ ಕೆಲಸ ಮಾಡುತ್ತಿ ದ್ದಾರೆ ಎಂದು ಹೇಳಿದರು.

ಶಾಸಕರ ಪ್ರಸ್ತಾಪದ ಪ್ರಕಾರವೇ ಹಣ ಬಿಡುಗಡೆಯಾಗಬೇಕು. ಆದರೆ ಇಲ್ಲಿಗೆ ಅವರು ಪ್ರಸ್ತಾಪ ಕಳುಹಿಸಿದ್ದಾರೋ ಎನ್ನುವ ಮಾಹಿತಿ ಯಿಲ್ಲ ಎಂದು ಎಂಜಿನಿಯರ್ ಹೇಳಿದರು. ಈ ವಿಚಾರದಲ್ಲಿ ಶಾಸಕರನ್ನು ಅವಮಾನಿಸಲಾಗಿದೆ. ಇದು ಸುಳ್ಯ ಕ್ಷೇತ್ರಕ್ಕೆ ಮಾಡಲಾದ ಅವಮಾನ. ಇದಕ್ಕೆ ಖಂಡನಾ ನಿರ್ಣಯ ಮಾಡಬೇಕೆಂದು ನವೀನ್ ರೈ ಮೇನಾಲ ಹೇಳಿದರೆ, ಕೆಲವರು ಅಧಿಕಾರದ ಮದದಿಂದ ವರ್ತಿಸುತ್ತಾರೆ ಎಂದು ಮುಳಿಯ ಹೇಳಿದರು.

ಸದಸ್ಯ ಅನಿಲ್ ರೈ ಮಾತನಾಡಿ, ಬೆಂಡೋಡಿ ಸೇತುವೆಗೆ ಶಾಸಕರು ಪ್ರಸ್ತಾಪ ಕಳುಹಿಸಿಲ್ಲ. ಅದಕ್ಕಾಗಿ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿದ್ದರೆ ಅದು ತಪ್ಪು. ಆದರೆ ಇದಕ್ಕೆ ಖಂಡನಾ ನಿರ್ಣಯದ ಆವಶ್ಯಕತೆ ಇಲ್ಲ. ಇಂತಹ ತಪ್ಪುಗಳು ಈ ಹಿಂದೆಯೂ ಹಲವು ಬಾರಿ ನಡೆದಿದೆ. ನಮ್ಮ ಉಸ್ತುವಾರಿ ಸಚಿವರಿಗೆ ಅಧಿಕಾರದ ಮದ ಇಲ್ಲ. ಅವರು ಕೂಡಾ 6 ಬಾರಿ ಶಾಸಕರಾದವರು ಎಂದರು.

ಪಡಿತರ ಚೀಟಿ ರದ್ದು
 ಸುಳ್ಯ ತಾಲೂಕಿನಲ್ಲಿ ರದ್ದುಪಡಿಸಲಾದ ಬಿಪಿಎಲ್ ಪಡಿತರ ಚೀಟಿಗಳ ಕುರಿತಂತೆಯೂ ತಾಪಂ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ನಗರ ಪ್ರದೇಶದಲ್ಲಿ 107 ಮತ್ತು ಗ್ರಾಮೀಣ ಪ್ರದೇಶದಲ್ಲಿ 40 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ನಿರೀಕ್ಷಕರು ಸಭೆಗೆ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಅನಿಲ್ ರೈ, ಪಡಿತರ ಚೀಟಿ ರದ್ದುಪಡಿಸುವಾಗ ಮಾನದಂಡ ಬಿಟ್ಟು ಹೋಗಬೇಡಿ. ಈ ಕುರಿತಂತೆ ಉಸ್ತುವಾರಿ ಸಚಿವರು ಕೂಡಾ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಇದಕ್ಕೆಲ್ಲಾ ಸರಕಾರದ ಹೊಸ ಮಾನದಂಡಗಳೇ ಕಾರಣ ಎಂದು ಮುಳಿಯ ಕೇಶವ ಭಟ್ ಹೇಳಿದರು. ಉಸ್ತುವಾರಿ ಸಚಿವರು ಬಾಯ್ದೆರೆಯಾಗಿ ಹೇಳಿದರೆ ಆಗುವುದಿಲ್ಲ. ಈ ಕುರಿತಂತೆ ಲಿಖಿತವಾಗಿ ಆದೇಶ ನೀಡಲಿ ಎಂದು ಗುಣವತಿ ಕೊಲ್ಲಂತಡ್ಕ ಹೇಳಿದರು.

ಬೆಳ್ಳಾರೆ ಪಪೂ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರ ಹುದ್ದೆಯನ್ನೇ ರದ್ದುಮಾಡಿರುವುದಾಗಿ ಮಾಹಿತಿ ಇದೆ. ಇದು ಕಾಲೇಜು ಮುಚ್ಚುವುದಕ್ಕೆ ಸಮಾನ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯವಾಗುವುದೆಂದು ಅನಿಲ್ ರೈ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News