ಪೇಜಾವರ ಸ್ವಾಮೀಜಿಯಿಂದ ಅದ್ದೂರಿ ಪುರಪ್ರವೇಶ: ಪರ್ಯಾಯ ಮಹೋತ್ಸವಕ್ಕೆ ಚಾಲನೆ
ಉಡುಪಿ, ಜ.4: ಇದೇ ತಿಂಗಳ 18ರಂದು ಐತಿಹಾಸಿಕ 5ನೆ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡ ಲಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತಿರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರ ಪುರಪ್ರವೇಶವು ಸೋಮವಾರ ಸಂಜೆ ಅದ್ದೂರಿಯಾಗಿ ಜರಗಿತು.
ಉಡುಪಿಗೆ ಅಧಿಕೃತವಾಗಿ ಪುರ ಪ್ರವೇಶಗೈಯುವ ಮೊದಲು ಪೇಜಾವರ ಸ್ವಾಮೀಜಿ ಬೆಳಗ್ಗೆ ಫಲಿ ಮಾರು ಮೂಲಮಠದಲ್ಲಿ ಪಟ್ಟದ ದೇವರ ಪೂಜೆ ನೆರವೇರಿಸಿದರು. ಫಲಿಮಾರು ಮಠದ ಗೌರವ ಸ್ವೀಕರಿಸಿದರು. ಬಳಿಕ ಮಧ್ಯಾಹ್ನ ಅಲಂಕೃತ ವಾಹನ ದಲ್ಲಿ ಅವರು ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥರೊಂದಿಗೆ ಉಡುಪಿಯ ಜೋಡುಕಟ್ಟೆಗೆ ಆಗಮಿಸಿದರು.
ಸ್ವಾಮೀಜಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಪ್ರಮೋದ್ ಮಧ್ವರಾಜ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಗರಸಭಾ ಅಧ್ಯಕ್ಷ ಯುವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ಮಾಜಿ ಶಾಸಕ ರಘುಪತಿ ಭಟ್, ಜಿ.ಶಂಕರ್ ಹಲವು ಗಣ್ಯರು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಸ್ವಾಮೀಜಿ, ಐದನೆ ಪರ್ಯಾಯದ ಬಗ್ಗೆ ನಮಗಿಂತ ಜನರಲ್ಲಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ. ಎಲ್ಲ ಕಡೆಯಿಂದ ಉತ್ತಮ ಸಹಕಾರ ಸಿಗುತ್ತಿದೆ. ಪರ್ಯಾಯ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಬಳಿಕ ನಡೆದ ಭವ್ಯ ಪುರಪ್ರವೇಶ ಮೆರವಣಿಗೆೆಯಲ್ಲಿ ಉಭಯ ಶ್ರೀಗಳನ್ನು ತೆರೆದ ವಾಹನದಲ್ಲಿ ಹಾಗೂ ಪಟ್ಟದ ದೇವರನ್ನು ಪಲ್ಲಕಿಯ ಮೂಲಕ ರಥ ಬೀದಿಗೆ ಕರೆತರಲಾಯಿತು. ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಕೋರ್ಟ್‌ರಸ್ತೆ, ಡಯಾನ ಸರ್ಕಲ್, ಕೆಎಂ ಮಾರ್ಗವಾಗಿ ಸಾಗಿ ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ರಸ್ತೆಯ ಮೂಲಕ ರಥಬೀದಿ ಪ್ರವೇಶಿಸಿತು.
ಅದ್ದೂರಿಯ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕುದುರೆಗಳು, ವಿವಿಧ ಬಿರುದಾವಳಿ, ತಟ್ಟಿರಾಯ, ಬ್ಯಾಂಡ್, ಕಂಸ ಕಹಳೆ, ಕೊಂಬು, ನಾಸಿಕ್ ಬ್ಯಾಂಡ್, ಭಜನಾ ತಂಡ, ಕೀಲು ಕುದುರೆ, ಕೊಡೆ ಮತ್ತು ಮುಖವಾಡ, ಪೂಜಾ ಕುಣಿತ, ಡೊಳ್ಳು ಕುಣಿತ, ತಾಲಿಮು, ಮರಕಾಲು ಸೇರಿದಂತೆ ವಿವಿಧ ನೃತ್ಯಗಳು ಆಕರ್ಷಣೀಯವಾಗಿತ್ತು. ಕೋರ್ಟ್ ರಸ್ತೆಯಲ್ಲಿ ಮುಸ್ಲಿಮರು ಮೆರವಣಿಗೆ ಯಲ್ಲಿ ಸಾಗುತ್ತಿದ್ದವರಿಗೆ ಮಜ್ಜಿಗೆಗಳನ್ನು ವಿತರಿಸಿದರು. ಮೆರವಣಿಗೆಯಲ್ಲಿ ರಾಜ್ಯ ಹೊರ ರಾಜ್ಯಗಳ ಸುಮಾರು 73 ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಸುಮಾರು 2 ಸಾವಿರ ಕಲಾ ವಿದರು ಹಾಗೂ 3 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಮೆರವಣಿಗೆಯ ಉಸ್ತುವಾರಿ ವಹಿಸಿಕೊಂಡಿರುವ ಡಾ.ಮೋಹನ್ ಆಳ್ವ ತಿಳಿಸಿದರು.
ಮೆರವಣಿಗೆಯೊಂದಿಗೆ ರಥಬೀದಿ ಪ್ರವೇಶಿಸಿದ ಸ್ವಾಮೀಜಿ, ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದೇವರ ದರ್ಶನ ಮತ್ತು ಶ್ರೀಚಂದ್ರಮೌಳೀಶ್ವರ ಹಾಗೂ ಶ್ರೀ ಅನಂತೇಶ್ವರ ದೇವರ ದರ್ಶನ ಪಡೆದರು. ಬಳಿಕ ಶ್ರೀಕೃಷ್ಣ ಮಠ ಪ್ರವೇಶ ಮಾಡಿದರು.