ಉಳ್ಳಾಲ: ರಸ್ತೆ ಕಾಂಕ್ರಿಟ್, ಅಬ್ಬಕ್ಕ ಸರ್ಕಲ್ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ
ಉಳ್ಳಾಲ, ಜ.4: ತೊಕ್ಕೊಟ್ಟುವಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಮಾದರಿ ರಸ್ತೆಯನ್ನು ರಚಿಸುವ ಮೂಲಕ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸಿ ಪಾದಚಾರಿ ಗಳಿಗೆ ನಡೆದಾಡಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿ ದ್ದಾರೆ.
ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ನೂತನ ಚತುಷ್ಪಥ ರಸ್ತೆ ಕಾಂಕ್ರಿಟ್ ಮತ್ತು ಅಬ್ಬಕ್ಕ ಸರ್ಕಲ್ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸೋಮೇಶ್ವರದಿಂದ ಮುಕ್ಕಚ್ಚೇರಿವರೆಗೆ ಸುಸಜ್ಜಿತ ರಸ್ತೆ, ಉಳ್ಳಾಲದ ನಗರಸಭೆ ಎದುರುಗಡೆಯಿಂದ ತೊಕ್ಕೊಟ್ಟು ಜಂಕ್ಷನ್‌ನವರೆಗಿನ ರಸ್ತೆಯ ಕಾಂಕ್ರಿಟೀಕರಣ ಗೊಳಿಸುವ ಮೂಲಕ ಉಳ್ಳಾಲವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಉಳ್ಳಾಲದ ಅಭಿವೃದ್ಧಿಗಾಗಿ ಸೇವೆ ಗೈದ ದಿ.ಶ್ರೀನಿವಾಸ ಮಲ್ಯ ಮತ್ತು ದಿ.ಅಲ್ಬುಕರ್ಕ್‌ರನ್ನು ನೆನಪಿಸುವಂತಹ ಕಾರ್ಯಯೋಜನೆಯನ್ನು ರೂಪಿಸಲಾಗು ವುದು. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಸಮುದ್ರ ತೀರವನ್ನು ಮಾದರಿಯನ್ನಾಗಿ ರೂಪಿಸಲು ನಗರಸಭೆಗೆ ಸೂಚಿಸಲಾಗಿದೆ. ಮುಕ್ಕಚ್ಚೇರಿ ಮತ್ತು ಸುಭಾಷ್ ನಗರದಲ್ಲಿ ಉದ್ಯಾನವನ ರಚಿಸುವ ಪ್ರಸ್ತಾಪವಿದೆ. ಕೋಟೆಪುರದಲ್ಲಿ ಮಿನಿ ಜಟ್ಟಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಹಂತ ಹಂತವಾಗಿ ದೊಡ್ಡ ಜಟ್ಟಿಯನ್ನಾಗಿ ಪರಿವರ್ತಿಸಲಾಗುವುದು ಎಂದರು.
ಆರೋಗ್ಯ ಮಾಹಿತಿಗೆ ಇ- ಗವರ್ನೆನ್ಸ್: ಪ್ರತಿ ಮನೆಮಂದಿಯ ಆರೋಗ್ಯದ ಬಗೆಗಿನ ಮಾಹಿತಿಯನ್ನು ಕಂಪ್ಯೂಟರ್ ಮೂಲಕ ಪಡೆಯಲು ಮತ್ತು ದಾಖಲಿಸುವ ಸಲುವಾಗಿ ಸರಕಾರ ಈಗಾಗಲೇ ಇ-ಗವರ್ನೆನ್ಸ್ ಯೋಜನೆಗೆ ಅನುಮೋದನೆ ನೀಡಿ ಶೀಘ್ರದಲ್ಲೇ ಚಾಲನೆ ನೀಡಲಿದ್ದು, ಆ ಮೂಲಕ ಪ್ರತಿಯೋರ್ವರ ಆರೋಗ್ಯದ ಕುರಿತು ಮಾಹಿತಿ ಮತ್ತು ಚಿಕಿತ್ಸೆ ಪಡೆಯಲು ವ್ಯವಸ್ಥೆ ಸಹಕಾರಿಯಾಗಲಿದೆ. ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ 4.95 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅಬ್ಬಕ್ಕ ಭವನ ನಿರ್ಮಾಣವಾಗಲಿದ್ದು, 600 ಸೀಟಿನ ಮತ್ತು ಹವಾನಿಯಂತ್ರಿತ ಸಭಾಭವನವನ್ನು ಬಡ ವರ್ಗದವರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ರಝಿಯಾ ಇಬ್ರಾಹೀಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಯು.ಎಸ್.ಹಂಝ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್‌ಕುಮಾರ್ ಉಳ್ಳಾಲ್, ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಉಳ್ಳಾಲ ಭಗವತಿ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಾಗರ್, ಬಿಜೆಪಿ ಮುಖಂಡ ಸೀತಾರಾಮ ಬಂಗೇರ, ಉಳ್ಳಾಲ ಮಂಡಲ ಪಂಚಾಯತ್ ಮಾಜಿ ಸದಸ್ಯ ರವೀಂದ್ರ ರಾಜ್ ಉಳ್ಳಾಲ್, ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಮುಕ್ಕಚ್ಚೇರಿ, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕಿರಿಯ ಅಭಿಯಂತರ ರೇಣುಕಾ, ಕೌನ್ಸಿಲರ್ಗಳಾದ ಮುಸ್ತಫಾ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ದಿನೇಶ್ ರೈ, ಪೊಡಿಮೋನು ಇಸ್ಮಾಯೀಲ್, ಹನೀಫ್ ಕೋಟೆಪುರ, ಸುಂದರ್ ಉಳಿಯ, ಉಸ್ಮಾನ್ ಕಲ್ಲಾಪು, ಗುತ್ತಿಗೆದಾರ ನಾಗೇಶ್ ಶೆಟ್ಟಿ, ಅಯ್ಯೂಬ್ ಉಳ್ಳಾಲ್, ರಾಝಿಕ್ ಉಳ್ಳಾಲ್ ಉಪಸ್ಥಿತರಿದ್ದರು. ಅಹ್ಮದ್ ಬಾವ ಕೊಟ್ಟಾರ ಸ್ವಾಗತಿಸಿ ದರು. ಉಳ್ಳಾಲ ಪುರಸಭೆಯ ಮಾಜಿ ಅಧ್ಯಕ್ಷ ಇಸ್ಮಾಯೀಲ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಪತ್ತಾಕ್ ವಂದಿಸಿದರು.