ನಾಲ್ಕನೆ ಸುತ್ತಿನ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ

Update: 2016-01-04 18:45 GMT

ಉಡುಪಿ, ಜ.4: ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಸೋಮವಾರ ಕುಕ್ಕಿಕಟ್ಟೆಯ ನಗರ ಕುಟುಂಬ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಇಂದ್ರಧನುಷ್ 4ನೆ ಹಂತದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಪ್ರಾಸ್ತಾವಿಕವಾಗಿ ಮಾತನಾಡಿ, 4ನೆ ಹಂತದ ಇಂದ್ರಧನುಷ್ ಕಾರ್ಯಕ್ರಮದಲ್ಲಿ 468 ಗರ್ಭಿಣಿಯರು, 2,464 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 295 ಲಸಿಕಾ ಕೇಂದ್ರಗಳು ಮತ್ತು 35 ಮೊಬೈಲ್ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು. ರೋಟರಿ ವಲಯ ಲಸಿಕಾ ವಿಭಾಗದ ಅಧ್ಯಕ್ಷ ಡಾ.ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್, ನಗರ ಕುಟುಂಬ ಕಲ್ಯಾಣ ಕೇಂದ್ರದ ನಿರ್ದೇಶಕಿ ಹರಿಣಿ ದಾಮೋದರ್ ಅಲ್ಲದೇ, ರೋಟರಿ, ಲಯನ್ಸ್, ರೆಡ್‌ಕ್ರಾಸ್‌ನ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಡಾ.ಪ್ರಭಾಕರ ಮಲ್ಯ ಸ್ವಾಗತಿಸಿದರು. ನಗರ ಕುಟುಂಬ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ದೇವರಾಜ ಮೂರ್ತಿ ವಂದಿಸಿದರು. ಅನಂತರಾಮ ಬಲ್ಲಾಳ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News