×
Ad

ನಾನು ಕೋಮುವಾದಿಯಲ್ಲ; ಪ್ರೇಮವಾದಿ: ಪೇಜಾವರಶ್ರೀ

Update: 2016-01-05 00:21 IST

ಉಡುಪಿ, ಜ.4: ಕೆಲವು ಪೂರ್ವಾಗ್ರಹ ಪೀಡಿತ ಬುದ್ಧಿಜೀವಿಗಳು ಹೇಳುವಂತೆ ನಾನು ದ್ವೇಷಬಿತ್ತುವ ಕೋಮುವಾದಿಯಲ್ಲ. ನಾನು ಪ್ರೇಮವಾದಿ. ನಾನು ಎಲ್ಲ ಅಸಹಿಷ್ಣುತೆಯನ್ನು ಸಮಾನವಾಗಿ ವಿರೋಧಿಸುತ್ತೇನೆ. ಎಲ್ಲಾ ಮತಗಳು, ಧರ್ಮಗಳನ್ನು ನಾನು ಸಮಾನವಾಗಿ ನೋಡುತ್ತೇನೆ. ಆದರೆ ಹಿಂದೂ ಧರ್ಮಕ್ಕೆ ಅಪಾಯ ಎದುರಾದಾಗ ನಾನು ಧ್ವನಿ ಎತ್ತುತ್ತೇನೆ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಹೇಳಿದ್ದಾರೆ.

ಇದೇ ಜ.18ರ ಮುಂಜಾನೆ ಮುಂದಿನ ಎರಡು ವರ್ಷಗಳ ಅವಧಿಯ ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕಾಗಿ ದಾಖಲೆಯ ಐದನೆ ಬಾರಿಗೆ ಶ್ರೀಕೃಷ್ಣ ಮಠದ ಪರ್ಯಾಯ ಸರ್ವಜ್ಞ ಪೀಠವನ್ನೇರುವ ಪೂರ್ವಭಾವಿಯಾಗಿ ಇಂದು ದೇಶ ಸಂಚಾರ ಮುಗಿಸಿ ಅಧಿಕೃತವಾಗಿ ಪುರಪ್ರವೇಶ ಮಾಡಿ ರಾತ್ರಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನಡೆದ ಪೌರಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನಾನು ಯಾವುದೇ ಒಂದು ಪಕ್ಷದ ಪರವಾಗಿ ಒಲವು ಹೊಂದಿದ್ದೇನೆ ಎಂಬುದು ಸುಳ್ಳು ಆರೋಪ. ನಿಜಲಿಂಗಪ್ಪರಿಂದ ಹಿಡಿದು ರಾಜ್ಯದ ಪ್ರತಿಯೊಬ್ಬ ಮುಖ್ಯಮಂತ್ರಿಗಳೊಂದಿಗೂ ನಾನು ಉತ್ತಮ ಸಂಬಂಧ ಹೊಂದಿದ್ದೆ. ಎಲ್ಲರಿಗೂ ಕೇಳಿದಾಗ ಸಲಹೆ-ಸೂಚನೆ ನೀಡಿದ್ದೇನೆ. ಅದೇ ರೀತಿ ಇಂದಿರಾ ಗಾಂಧಿ, ವಿ.ಪಿ.ಸಿಂಗ್‌ರಿಂದ ಹಿಡಿದು ಪ್ರತಿಯೊಬ್ಬ ಪ್ರಧಾನ ಮಂತ್ರಿಯರು ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.

ನನ್ನ ಐದನೆ ಪರ್ಯಾಯದಿಂದ ನನಗಿಂತಲೂ ಜನತೆ ಹೆಚ್ಚು ಉತ್ಸಾಹ, ಸಂತೋಷ, ಆಸಕ್ತಿಯನ್ನು ಹೊಂದಿದ್ದಾರೆ. ಇದು ನನಗೆ ಹೆಚ್ಚು ಧೈರ್ಯವನ್ನು ತುಂಬಿದೆ ಎಂದರು. ಶ್ರೀಗಳಿಗೆ ನಗರಸಭೆಯ ವತಿಯಿಂದ ಪೌರ ಸನ್ಮಾನ ನಡೆಯಿತು. ನಗರಸಭಾ ಅಧ್ಯಕ್ಷ ಪಿ.ಯುವರಾಜ್, ಪೌರಾಯುಕ್ತ ಡಿ.ಮಂಜುನಾಥಯ್ಯ ಸ್ವಾಮೀಜಿಗೆ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನ ಪತ್ರ ಅರ್ಪಿಸಿದರು. ಇದೇ ವೇಳೆ ಯುವರಾಜ್‌ವರು ಶ್ರೀವಿಶ್ವೇಶತೀರ್ಥ ಮಾರ್ಗದ ಘೋಷಣೆಯನ್ನೂ ಮಾಡಿದರು.

 ಬೆಂಗಳೂರು ಪೋಸ್‌ಟ್ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅವರು ಅಂಚೆ ಇಲಾಖೆ ಇದೇ ಸಂದರ್ಭದಲ್ಲಿ ಹೊರತಂದ ಪೇಜಾವರ ಶ್ರೀಯವರ ವಿಶೇಷ ಅಂಚೆ ಕವರ್ ಹಾಗೂ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲೆಯ ಕ್ರೈಸ್ತ ಬಂಧುಗಳ ಪರವಾಗಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಶ್ರೀಯನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಂ.ಫ್ರೆಡ್ ಮಸ್ಕರೇಸನ್, ವಂ.ಡೇನಿಸ್ ಡೇಸಾ, ಅಲ್ಫೋನ್ಸ್ ಡಿಕೋಸ್ತ ಇದ್ದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಪರವಾಗಿ ಅಧ್ಯಕ್ಷ ಜನಾರ್ದನ ತೋನ್ಸೆ, ಸ್ವಾಗತ ಸಮಿತಿಯ ಪರವಾಗಿ ಡಾ.ಮೋಹನ ಆಳ್ವ ಮತ್ತಿತರ ಪದಾಧಿಕಾರಿಗಳು ಪೇಜಾವರ ಮಠದ ಹಿರಿಯ ಹಾಗೂ ಕಿರಿಯ ಯತಿಗಳನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.ಪರ್ಯಾಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಅಭಿನಂದನಾ ಭಾಷಣ ಮಾಡಿದರು. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಶಾಸಕ ಪ್ರಮೋದ್ ಮಧ್ವರಾಜ್ ಸ್ವಾಗತಿಸಿದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಹೆರಂಜೆ ಕೃಷ್ಣ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News