ರಾಜಸ್ಥಾನದಲ್ಲಿ ಮೃತಪಟ್ಟ ಯೋಧನ ಅಂತ್ಯಸಂಸ್ಕಾರ
ಮೂಡುಬಿದಿರೆ: ರಾಜಸ್ಥಾನದಲ್ಲಿ ಸೇನಾ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಡಗ ಮಿಜಾರು ಗ್ರಾಮದ ಗಿರೀಶ್ ಈಶ್ವರ ಪೂಜಾರಿ (35), ಜ.2ರಂದು ಸೇನಾ ವಸತಿಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವು ಸೋಮವಾರ ರಾತ್ರಿ ಉರ್ಕಿ ಮನೆಯಲ್ಲಿ ನಡೆಯಿತು.
ರಾಜಸ್ಥಾನದಿಂದ ದೆಹಲಿಗೆ ಸೋಮವಾರ ಬೆಳಿಗ್ಗೆ ಮೃತದೇಹವನ್ನು ತರಲಾಯಿತು. 10ಗಂಟೆಗೆ ದೆಹಲಿಯಿಂದ ಗಿರೀಶ್ ಮೃತದೇಹವನ್ನು ವಿಮಾನ ಬೆಂಗಳೂರಿಗೆ ಸಾಗಿಸಲಾಯಿತು. ಮಧ್ಯಾಹ್ನ 12.45 ವೇಳೆಗೆ ಬೆಂಗಳೂರಿಗೆ ಮೃತದೇಹವು ತಲುಪಿದ್ದು, 2 ಗಂಟೆಗೆ ಮೃತದೇಹವನ್ನು ಮತ್ತೆ ಮೂಡುಬಿದಿರೆ ಸಮೀಪದ ಬಡಗ ಎಡಪದವಿಗೆ ಅಂಬ್ಯುಲೆನ್ಸ್ ಮುಖಾಂತರ ತರಲಾಯಿತು. ಸುಮಾರು 10ಗಂಟೆ ವೇಳೆಗೆ ಗಿರೀಶ್ ಮೃತದೇಹವು ಉರ್ಕಿಯ ಮನೆಯನ್ನು ತಲುಪಿದ್ದು, ಸೇನಾ ಅಧಿಕಾರಿಗಳು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ಸುಬೇದರ್ ಜಿ.ಬಿ ಶರತ್ ಹಾಗೂ ಗಿರೀಶ್ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದ ನಾಯಕ್ ಪಳಣಿ ಮೃತದೇಹವನ್ನು ಕುಟುಂಬದವರಿಗೆ ಸಹಸ್ತಾಂತರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಸಹಾಯಕ ಆಯುಕ್ತ ಅಶೋಕ್, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್, ಮೂಡುಬಿದರೆ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್, ಬಜ್ಪೆ ಪೊಲೀಸ್ ನಿರೀಕ್ಷಕ ಟಿ.ಡಿ ನಾಗರಾಜ್ ಸಹಿತ ಬಜ್ಪೆ ಪೊಲೀಸರು ಹಾಗೂ ಮೂಡುಬಿದಿರೆ ಪೊಲೀಸರು ಉಪಸ್ಥಿತರಿದ್ದು, ಗೌರವ ಸಲ್ಲಿಸಿದ್ದರು. ಗಿರೀಶ್ ಸಂಬಂಧಿಕರು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.