ಧರ್ಮಸ್ಥಳ ಪೊಲೀಸ್ ಠಾಣೆ 10 ದಿನಗಳೊಳಗೆ ಉದ್ಘಾಟನೆ: ಎಸ್ಪಿ
Update: 2016-01-05 13:20 IST
ಮಂಗಳೂರು: ಧರ್ಮಸ್ಥಳದಲ್ಲಿ ನೂತನ ಪೊಲೀಸ್ ಠಾಣೆಗೆ ಎಸ್‌ಐ ಹಾಗೂ 12 ಸಿಬ್ಬಂದಿಗಳ ನೇಮಕವಾಗಿದ್ದು, 10 ದಿನಗಳೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ. ದ.ಕ. ಜಿಲ್ಲಾಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ದಲಿತರ ಕುಂದುಕೊರತೆಗಳ ಮಾಸಿಕ ಸಭೆಯಲ್ಲಿ ಧರ್ಮಸ್ಥಳ ಠಾಣೆ ಮಂಜೂರುಗೊಂಡು, ಸಿಬ್ಬಂದಿಗಳ ನೇಮಕಾತಿ ಆಗಿ ಆರು ತಿಂಗಳು ಕಳೆದರೂ ಠಾಣೆ ಉದ್ಘಾಟನೆಗೊಂಡಿಲ್ಲ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದರು. ಚುನಾವಣೆ ಹಾಗೂ ಜಿಲ್ಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಠಾಣೆಯ ಉದ್ಘಾಟನಾ ಕಾರ್ಯ ವಿಳಂಬವಾಗಿದೆ ಎಂದವರು ಹೇಳಿದರು.