ದಿ ಹಿಂದೂ ಸಂಪಾದಕಿ ಮಾಲಿನಿ ಪಾರ್ಥಸಾರಥಿ ರಾಜೀನಾಮೆ
ಪ್ರತಿಷ್ಠಿತ ದಿ ಹಿಂದೂ ಆಂಗ್ಲ ಪತ್ರಿಕೆಯ ಪ್ರಧಾನ ಸಂಪಾದಕ ಸ್ಥಾನಕ್ಕೆ ಮಾಲಿನಿ ಪಾರ್ಥಸಾರಥಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಸುರೇಶ ನಂಬತ್ ಅವರು ಪತ್ರಿಕೆಯ ಹಂಗಾಮಿ ಸಂಪಾದಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
"ಮಾಲಿನಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ರಾಜಿನಾಮೆ ನೀಡಿದ್ದು ಅವರ ರಾಜೀನಾಮೆಯನ್ನು ದಿ ಹಿಂದೂ ಆಡಳಿತ ಮಂಡಳಿ ಸ್ವೀಕರಿಸಿದೆ. ಮುಂದಿನ ಸಂಪಾದಕರ ಆಯ್ಕೆ ಆಗುವವರೆಗೆ ಪತ್ರಿಕೆಯ ರಾಷ್ಟ್ರೀಯ ಸಂಪಾದಕ ಸುರೇಶ ನಂಬತ್ ಅವರು ದೈನಂದಿನ ಸಂಪಾದಕೀಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಇದನ್ನು ಸಂಬಂಧಪಟ್ಟ ಪತ್ರಿಕೆಯ ಎಲ್ಲ ವಿಭಾಗಗಳಿಗೆ ತಿಳಿಸಲಾಗಿದೆ " ಎಂದು ಪತ್ರಿಕೆಯ ಅಧ್ಯಕ್ಷ ಎನ್ . ರಾಮ್ ಅವರು ದಿ ನ್ಯೂಸ್ ಮಿನಿಟ್ ಗೆ ಖಚಿತಪಡಿಸಿದ್ದಾರೆ.
"ನನ್ನ ಕಳೆದ ೧೧ ತಿಂಗಳ ನಿರ್ವಹಣೆಯ ಬಗ್ಗೆ ಅತೃಪ್ತಿ ಇದೆ ಎಂದು ಕಂಡು ಬಂದಿರುವುದರಿಂದ ನಾನು ರಾಜಿನಾಮೆ ನೀಡುತ್ತಿದ್ದೇನೆ. ಇಷ್ಟು ಚಿಕ್ಕ ಅವಧಿಯಲ್ಲಿ ಪತ್ರಿಕೆಯ ಮುಂಬೈ ಆವೃತ್ತಿ ಆರಂಭ ಹಾಗು ಪತ್ರಿಕೆಯ ಸಂಪಾದಕೀಯ ಗುಣಮಟ್ಟ ಹೆಚ್ಚಿಸಿದ ನನ್ನ ಸಾಧನೆಯ ಹೊರತಾಗಿಯೂ ನನ್ನ ನಿರ್ವಹಣೆಯ ಬಗ್ಗೆ ಇಂತಹ ತೀರ್ಮಾನಕ್ಕೆ ಬಂದಿರುವುದು ನನಗೆ ತೀವ್ರ ಅಸಮಧಾನ ಉಂಟು ಮಾಡಿದೆ. ಹೋಲ್ ಟೈಮ್ ನಿರ್ದೇಶಕನಾಗಿ ನಾನು ಮುಂದುವರೆಯುತ್ತೇನೆ " ಎಂದು ಮಾಲಿನಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.