ಹೃದಯಾಘಾತದಿಂದ ನಿಧನ ಹೊಂದಿದ ಯೋಧನ ಅಂತ್ಯಸಂಸ್ಕಾರ

Update: 2016-01-05 18:36 GMT

ಮೂಡುಬಿದಿರೆ, ಜ.5: ಸುಮಾರು 17 ವರ್ಷಗಳಿಂದ ಸೇನಾ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಡಗ ಎಡಪದವು ಗ್ರಾಮದ ಯೋಧ ಗಿರೀಶ್ ಈಶ್ವರ ಪೂಜಾರಿ (35) ಜ.2ರಂದು ರಾಜಸ್ಥಾನದ ಸೇನಾ ವಸತಿಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವು ಇಲ್ಲಿನ ಉರ್ಕಿ ಮನೆಯಲ್ಲಿ ಸೋಮವಾರ ರಾತ್ರಿ 12:30ಕ್ಕೆ ನಡೆಯಿತು. ಮೃತದೇಹವನ್ನು ರಾಜಸ್ಥಾನದಿಂದ ದಿಲ್ಲಿಗೆ ತಂದು ಬಳಿಕ ಅಲ್ಲಿಂದ ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಮಧ್ಯಾಹ್ನ 12:45 ವೇಳೆಗೆ ಬೆಂಗಳೂರಿಗೆ ತರಲಾಯಿತು. ಅಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಆ್ಯಂಬುಲೆನ್ಸ್ ಮುಖಾಂತರ ಮೃತದೇಹವನ್ನು ಮೂಡುಬಿದಿರೆ ಸಮೀಪದ ಬಡಗ ಎಡಪದವಿಗೆ ತರಲಾಯಿತು. ರಾತ್ರಿ 10 ಗಂಟೆಗೆ ಗಿರೀಶ್ ಮೃತದೇಹವನ್ನು ಸೇನಾ ಅಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ರಾಜಸ್ಥಾನ ಗಂಗಾನಗರದ ಇ.ಎಂ.ಇ ಘಟಕದ ನಾಯಕ್ ಪಳನಿ, ಬೆಂಗಳೂರು ಎಎಸ್‌ಇ ಕೇಂದ್ರದ ಸುಬೇದಾರ್ ಜಿ.ಬಿ ಶರತ್, ಹಾಗೂ ಸಿಬಂದಿ ವರ್ಗ, ಪತ್ನಿ ರೇಖಾ, 4 ವರ್ಷದ ಮಗ ಗಗನ್ ಜತೆಯಲ್ಲಿದ್ದರು. ಗಿರೀಶ್ ಅವರ ಅಂತಿಮ ದರ್ಶನ ಪಡೆಯಲು ಮೃತರ ಸಂಬಂಧಿಕರು, ಮಿತ್ರರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಈ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್ ಕುಮಾರ್, ತಹಶೀಲ್ದಾರ್ ಮುಹಮ್ಮದ್ ಇಸಾಕ್, ಬಜ್ಪೆಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ಶವಪೆಟ್ಟಿಗೆಗೆ ಹೆಗಲು ಕೊಟ್ಟು ಗಮನಸೆಳೆದರು. ಮೂಡುಬಿದಿರೆ ಅರಣ್ಯಾಧಿಕಾರಿ ಜಿ.ಡಿ. ದಿನೇಶ್, ಮಂಗಳೂರು ಮತ್ತು ಮೂಡುಬಿದಿರೆಯ ಮಾಜಿ ಸೈನಿಕರ ವೇದಿಕೆಯ ಪ್ರಮುಖರು, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್, ಬಡಗ ಎಡಪದವು ಗ್ರಾಪಂ ಅಧ್ಯಕ್ಷೆ ಲಲಿತಾ, ಜಿಪಂ ಸದಸ್ಯ ಜನಾರ್ದನ ಗೌಡ, ತಾಪಂ ಸದಸ್ಯ ಪ್ರಕಾಶ್ ಮತ್ತಿತರ ಜನಪ್ರತಿನಿಧಿಗಳು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಸುಧಾಕರ ಪೂಂಜ ಯೋಧನ ಅಂತಿಮ ದರ್ಶನ ಪಡೆದರು. ರಾಜಸ್ಥಾನದ ಗಂಗಾನಗರದ 616 ಇಎಂಇ ಬೆಟಾಲಿಯನ್‌ನ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಸುತ್ತಿದ್ದ ಗಿರೀಶ್ ಕಳೆದ ಶನಿವಾರ ಕರ್ತವ್ಯ ಮುಗಿಸಿ ಮಧ್ಯಾಹ್ನ ಮಿಲಿಟರಿ ವಸತಿಗೃಹಕ್ಕೆ ಬಂದಿದ್ದರು. ಊಟ ಮುಗಿಸಿ ಸ್ನಾನಗೃಹಕ್ಕೆ ತೆರಳಿದಾಗ ಕುಸಿದುಬಿದ್ದರೆನ್ನಲಾಗಿದೆ. ತಕ್ಷಣ ಹತ್ತಿರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ದಿ. ಈಶ್ವರ ಪೂಜಾರಿಯ ಏಳು ಮಕ್ಕಳ ಪೈಕಿ ಗಿರೀಶ್ ಕೊನೆಯವರು. ಪ್ರಾಥಮಿಕ ಶಿಕ್ಷಣ ಮಿಜಾರಿನ ಮುಳಿಬೆಟ್ಟು ಮತ್ತು ಹೈಸ್ಕೂಲ್ ಶಿಕ್ಷಣ ಹೊಸಬೆಟ್ಟು ಸರಕಾರಿ ಶಾಲೆಯಲ್ಲಿ ಪೂರೈಸಿದ್ದರು. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ವಿದ್ಯಾರ್ಥಿ ಜೀವನದಲ್ಲೇ ಮಿಲಿಟರಿ ಸೇರುವ ಹಂಬಲ ಕಂಡಿದ್ದರು. ಹೈಸ್ಕೂಲ್ ಶಿಕ್ಷಣದ ಬಳಿಕ ಎರಡು ವರ್ಷ ಬೆಂಗಳೂರಿನ ಹೊಟೇಲ್‌ನಲ್ಲಿ ಕೆಲಸಕ್ಕಿದ್ದು, ಬಳಿಕ ಸಿಕಂದರಾಬಾದ್‌ನಲ್ಲಿ ಪಿಯುುಸಿ ಶಿಕ್ಷಣ ಮುಂದುವರಿಸಿ ತನ್ನ ಸಂಬಂಧಿ ನಿವೃತ್ತ ಸೈನಿಕ ಹರಿಯಪ್ಪಅವರ ಸಹಕಾರದಲ್ಲಿ ಸೇನೆಗೆ ಸೇರಿ ದಿಲ್ಲಿ, ಕಲ್ಕತ್ತ, ಜಮ್ಮುಕಾಶ್ಮೀರ ಹಾಗೂ ರಾಜಸ್ಥಾನಗಳ ಕರ್ತವ್ಯ ನಿರ್ವಹಿಸಿದ್ದರು.

  2011ರಲ್ಲಿ ಹಂಡೇಲಿನ ರೇಖಾ ಪೂಜಾರ್ತಿಯನ್ನು ವಿವಾಹವಾಗಿದ್ದು, ನಾಲ್ಕು ವರ್ಷದ ಗಗನ್‌ನನ್ನು ಅಗಲಿದ್ದಾರೆ. 20 ದಿನಗಳ ಹಿಂದೆ ಊರಿಗೆ ಬಂದವರು ಪತ್ನಿ ಹಾಗೂ ಮಗನನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News