ಸಂಸದ ನಳಿನ್, ಕಾರಂತ ಭಾಷಣದ ವಿರುದ್ಧ ಪ್ರಕರಣ; ಸುಳ್ಯ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ
ಸುಳ್ಯ, ಜ.5: ಏಳು ವರ್ಷಗಳ ಹಿಂದೆ ಸುಳ್ಯದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಜಗದೀಶ ಕಾರಂತ ಕೋಮಭಾವನೆ ಕೆರಳಿಸುವ ಭಾಷಣ ಮಾಡಿದ್ದಾಗಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನ್ಯಾಯಾಲಯದಲ್ಲಿ ಮಂಗಳವಾರ ಸಾಕ್ಷಿಗಳ ವಿಚಾರಣೆ ನಡೆಯಿತು.
2009ರ ಫೆ. 2ರಂದು ಸುಳ್ಯದ ಬಸ್ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆದ ಹಿಂದೂ ಜಾಗೃತಿ ಸಮಾವೇಶದಲ್ಲಿ ಆಗ ಬಿಜೆಪಿ ಜಿಲ್ಲಾ ನಾಯಕರಾಗಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಜಗದೀಶ್ ಕಾರಂತ ಮುಖ್ಯ ಭಾಷಣ ಮಾಡಿದ್ದರು. ಕೋಮುಭಾವನೆ ಕೆರಳಿಸುವ ಭಾಷಣ ಮಾಡಿದ್ದಾಗಿ ಕೆ.ಎಸ್.ಉಮರ್ ಸುಳ್ಯ ನ್ಯಾಯಾಲಯದಲ್ಲಿ ನಳಿನ್ ಮತ್ತು ಜಗದೀಶ್ ಕಾರಂತ ಹಾಗೂ ಇತರ ಸಂಘಟಕರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಬಳಿಕ ಸಂಸದರಾಗಿ ಆಯ್ಕೆಗೊಂಡಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಜಗದೀಶ ಕಾರಂತರು ಕೂಡ ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ದಾವೆಯ ವೇಳೆ ಉಮರ್ ಅವರು ಕಟೀಲ್ ಮತ್ತು ಜಗದೀಶ್ ಕಾರಂತ ಭಾಷಣ ಪ್ರಕಟಿಸಿದ ಪತ್ರಿಕೆಗಳನ್ನು ಹಾಜರುಪಡಿಸಿದ್ದರು. ಹೀಗಾಗಿ ಪತ್ರಕರ್ತರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಸಾಕ್ಷಿಗಳ ವಿಚಾರಣೆ ಮಂಗಳವಾರ ನಡೆಯಿತು.