ಪ್ರಸ್ತುತ ಪಾಕ್ಷಿಕದ 10ನೆ ವರ್ಷಾಚರಣೆ: ಜ.8ರಂದು ‘ಪ್ರಜಾಪ್ರಭುತ್ವ ಮಾಧ್ಯಮ’ ವಿಚಾರಗೋಷ್ಠಿ
ಮಂಗಳೂರು, ಜ.5: ಪ್ರಸ್ತುತ ಪಾಕ್ಷಿಕದ 10ನೆ ವರ್ಷದ ಕಾರ್ಯಕ್ರಮದ ಅಂಗವಾಗಿ ಜ.8ರಂದು ಬೆಳಗ್ಗೆ 10 ಗಂಟೆಗೆ ‘ಪ್ರಜಾಪ್ರಭುತ್ವ ಮತ್ತು ಮಾಧ್ಯಮ’ ಎಂಬ ವಿಚಾರಗೋಷ್ಠಿ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ‘ಪ್ರಸ್ತುತ’ ಪಾಕ್ಷಿಕ ಪತ್ರಿಕೆಯ ಉಪಸಂಪಾದಕ ಅಬ್ದುರ್ರಝಾಕ್ ಕೆಮ್ಮಾರ ತಿಳಿಸಿದ್ದಾರೆ.
ಈ ವಿಚಾರಗೋಷ್ಠಿಯಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ನಿಕಟಪೂರ್ವ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು, ಖ್ಯಾತ ಬರಹಗಾರ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ರಾಮ್ ಪುನಿಯಾನಿ, ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್, ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಭಾಗವಹಿಸಲಿದ್ದಾರೆ. ಹೊಸದಿಲ್ಲಿಯ ಎಂಪವರ್ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷ ಇ.ಎಂ.ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜ.8ರಂದು ಅಪರಾಹ್ನ 2:30 ಗಂಟೆಗೆ ನಗರದ ಪುರಭವನದಲ್ಲಿ ‘ಪ್ರಸ್ತುತ’ ಪಾಕ್ಷಿಕದ ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ, ಮಾಹಿತಿ ಮತ್ತು ಹಜ್ ಸಚಿವ ಆರ್.ರೋಶನ್ ಬೇಗ್ ಬಿಡುಗಡೆಗೊಳಿ ಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೆಳಗ್ಗಿನ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಮೈಸೂರು ವಿವಿ ಮಾಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶ್ ಚಂದ್ರಗುರು, ರಂಗಕರ್ಮಿ, ಅಂಕಣಕಾರ ಯೋಗೇಶ್ ಮಾಸ್ಟರ್, ಸಾಮಾಜಿಕ ಕಾರ್ಯಕರ್ತ ಅನೀಸ್ ಅಹ್ಮದ್, ಮಹಿಳಾ ಹೋರಾಟಗಾರ್ತಿ ಶಾಹಿದ್ ತಸ್ನೀಮ್, ಇನ್‌ಲ್ಯಾಂಡ್ ಗ್ರೂಪ್ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಮೊದಲಾದವರು ಭಾಗವಹಿಸಲಿದ್ದಾರೆ.
‘ಪ್ರಸ್ತುತ’ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ.ಶರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ವಿವರಿಸಿದರು. ಸಂಜೆ 6:30 ಗಂಟೆಗೆ ನಗರದ ಪುರಭವನದಲ್ಲಿ ಕವಿ ಸಿಂಚನ ಕಾರ್ಯಕ್ರಮ ನಡೆಯಲಿದೆ. ಬ್ಯಾರಿ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ‘ಪ್ರಸ್ತುತ’ ಕಳೆದ 9 ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳು ಸೇರಿದಂತೆ ಕರ್ನಾಟಕ ಹಾಗೂ ಅನಿವಾಸಿ ಭಾರತೀಯ ಓದುಗ ಬಳಗವನ್ನು ಹೊಂದಿದೆ ಎಂದು ಸಂಪಾದಕ ಝಿಯಾ ವುಲ್ ಹಕ್ ಎಚ್. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ ಅಬ್ದುಲ್ ಹಮೀದ್ ಕೆ.ವೈ., ಸ್ತುತಿ ಪಬ್ಲಿಕೇಶನ್ ಆ್ಯಂಡ್ ಇನ್ಫಾರ್ಮೇಶನ್ ಟ್ರಸ್ಟ್‌ನ ವ್ಯವಸ್ಥಾಪಕ ಅಬ್ದುಲ್ ರಹೀಂ ಮೊದಲಾದವರು ಉಪಸ್ಥಿತರಿದ್ದರು.