ಅಭಯಾರಣ್ಯದಲ್ಲಿ ಅಭಿವೃದ್ಧಿಯ ಹೆಸರಲ್ಲಿ ದ್ವಂದ್ವನೀತಿ

Update: 2016-01-05 18:38 GMT

ಜಿಲ್ಲಾಮಟ್ಟದ ದಲಿತ ಕುಂದುಕೊರತೆಗಳ ಸಭೆಯಲ್ಲಿ ಆರೋಪ

ಮಂಗಳೂರು, ಜ. 5: ಬೆಳ್ತಂಗಡಿ ತಾಲೂಕಿನ ನಾರಾವಿ, ನಾವೂರು ಮೊದಲಾದ ಅಭಯಾ ರಣ್ಯಗಳಲ್ಲಿ ಆದಿವಾಸಿಗಳು ರಸ್ತೆ ನಿರ್ಮಾಣ ಅಥವಾ ಅಭಿವೃದ್ಧಿಗೆ ಅನುಮತಿ ಕೋರಿದರೆ ಸಿಗುವುದಿಲ್ಲ. ಆದರೆ ಅರಣ್ಯ ಅಧಿಕಾರಿಗಳು ಮಾತ್ರ ಬುಲ್ಡೋಝರ್ ಬಳಸಿ ಮರಗಳ ಮಾರಣಹೋಮ ನಡೆಸಿ ರಸ್ತೆ ನಿರ್ಮಿಸುವಾಗ ಯಾವುದೇ ಕಾನೂನು ಅಡ್ಡಿಯಾಗುತ್ತಿಲ್ಲ. ಅಭಯಾರಣ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದ್ವಂದ್ವ ನೀತಿ ಅನುಸರಿಸುತ್ತ್ತಿದ್ದಾರೆ ಎಂಬ ಆರೋಪ ಇಂದು ನಡೆದ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ದಲಿತ ಕುಂದುಕೊರತೆಗಳ ಸಭೆಯಲ್ಲಿ ವ್ಯಕ್ತವಾಯಿತು. ದ.ಕ.ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ದಲಿತ ಹಕ್ಕುಗಳ ಹೋರಾಟ ಸಮಿತಿಯ ಈಶ್ವರಿ ಈ ಆರೋಪ ವ್ಯಕ್ತಪಡಿಸಿದರು. ನಾರಾವಿಯ ಆಲಂಬದಲ್ಲಿ ಈಗಾಗಲೇ ಇರುವ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಆದಿವಾಸಿಗಳು ಅನುಮತಿ ಕೋರಿದ್ದರೂ ನಿರಾಕರಿಸಲಾಗಿದೆ. ಕುತ್ಲೂರಿನ ನಾರಾವಿಯ ಕಾಸರೋಳಿ ಮತ್ತು ಮಲ್ಲ ಸಮೀಪ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಆದರೆ ಈ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯು ಸುಮಾರು 15 ಕಿ.ಮೀ. ಉದ್ದಕ್ಕೆ ಜೆಸಿಬಿ ನೆರವಿನಿಂದ ಬೃಹದಾಕಾರದ ಮರಗಳನ್ನು ಕಡಿದುರುಳಿಸಿ ರಸ್ತೆ ನಿರ್ಮಿಸಿದೆ. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದಾಗ ಅದು ಕಾಡಿನಲ್ಲಿ ಅಹಿತಕರ ಘಟನೆಗಳು ಸಂಭವಿಸುವ ವೇಳೆ ಅರಣ್ಯ ಸಿಬ್ಬಂದಿ ಮುಕ್ತವಾಗಿ ಸಂಚರಿಸುವ ಅನುಕೂಲಕ್ಕೆ ಎಂಬ ಉತ್ತರ ದೊರಕಿದೆ. ಹಾಗಾ ದರೆ ಅಭಯಾರಣ್ಯದ ಸಾಮಾನ್ಯ ಬಳಕೆಗೆ ರಸ್ತೆ ನಿರ್ಮಿಸಲು ಅಡ್ಡಿಯಾಗುವ ಕಾನೂನು ಅರಣ್ಯ ಇಲಾಖೆಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ ಈಶ್ವರಿ, ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ಈ ಆಕ್ಷೇಪಕ್ಕೆ ದನಿಗೂಡಿಸಿದ ಶೇಖರ್, ಯಾವುದೇ ಪರವಾನಿಗೆ ಇಲ್ಲದೆ ಅಲ್ಲಿನ ನೂರಾರು ಮರಗಳನ್ನು ಕಡಿಯಲಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆಯಡಿ ಅಭಯಾರಣ್ಯದಲ್ಲಿ ಕಳೆದ 15 ವರ್ಷಗಳಿಂದ 150ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದರೂ, ಇದಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯಲ್ಲಿ ಯಾವುದೇ ದಾಖಲಾತಿ ಇಲ್ಲ. 24 ಗಂಟೆಗಳ ಕಾಲ ದುಡಿಯುತ್ತಿದ್ದರೂ ಇವರಿಗೆ ಸಿಗುವ ಸಂಬಳ ಕೇವಲ 8,000 ರೂ. ಮಾತ್ರ. ಅಲ್ಲದೆ ಇವರನ್ನು ಎರಡೂವರೆ ತಿಂಗಳಿಗೊಮ್ಮೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬದಲಾಯಿಸಲಾಗುತ್ತದೆ. ಈ ಸಿಬ್ಬಂದಿ ಯಲ್ಲಿ ಹೆಚ್ಚಿನವರು ಆದಿವಾಸಿ ಹಾಗೂ ದಲಿತರು ಎಂದು ಶೇಖರ್ ಪ್ರಸ್ತಾಪಿಸಿದರು. 
ಸ್ವಾಯತ್ತ ಸಂಸ್ಥೆಗಳಲ್ಲಿನ ಅರೆ ಸರಕಾರಿ ನೌಕರರಿಗೆ ಪದೋನ್ನತಿಗೆ ಆಗ್ರಹ
ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ಅರೆ ಸರಕಾರಿ ನೌಕರರಾಗಿ, ಗುಮಾಸ್ತರಾಗಿ ಹಲವು ವರ್ಷ ಗಳಿಂದ ದುಡಿಯುವ ನೌಕರರಿಗೆ ಅರ್ಹತೆ ಇದ್ದರೂ ಪದೋನ್ನತಿ ಸಿಗದ ಪರಿಸ್ಥಿತಿ ಇದೆ ಎಂದು  ದಲಿತ ನಾಯಕ ರಘುವೀರ್ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಅಧಿಕಾರಿ ಡಾ.ಸಂತೋಷ್‌ಕುಮಾರ್, ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಇತ್ತೀಚೆಗೆ ನಡೆದಿರುವ ಸಭೆಯಲ್ಲಿ ನಿರ್ಧರಿಸಲಾಗಿದೆ. ಸ್ವಾಯತ್ತ ಸಂಸ್ಥೆಗಳ ಬಗ್ಗೆಯೂ ಗಮನ ಹರಿಸಲಾ ಗುವುದು. ಆ ಸಂಸ್ಥೆಗಳು ಅರ್ಹ ನೌಕರರಿಗೆ ಪದೋನ್ನತಿ ನೀಡದಿದ್ದರೆ, ವಿವಿ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾ ಗುವುದು ಎಂದವರು ಹೇಳಿದರು. ಕೆಎಸ್ಸಾರ್ಟಿಸಿ ಬಸ್‌ಗಳ ಹಿಂಭಾಗದಲ್ಲೂ ನಾಮ 
ಫಲಕಗಳನ್ನು ಅಳವಡಿಸಬೇಕೆಂಬ ಬಗ್ಗೆ ಕಳೆದ ಐದಾರು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಕ್ರಮ ಆಗಿಲ್ಲ ಎಂದು ದಲಿತ ನಾಯಕರೊಬ್ಬರು ಸಭೆಯಲ್ಲಿ ತಿಳಿಸಿದಾಗ, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ಮುಂದಿನ ಸಭೆಯಲ್ಲಿ ವರದಿ ಮಂಡಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. 
ಆಮಿಷವೊಡ್ಡುವ ಕಂಪೆನಿಗಳ ಬಗ್ಗೆ ಎಚ್ಚರವಹಿಸಲು ಸೂಚನೆ
ಅಕ್ರಮವಾಗಿ ಹಣ ಸಂಗ್ರಹಿಸುವ ಆರೋಪ ದಲ್ಲಿ ಸಮೃದ್ಧ ಜೀವನ್ ಮಲ್ಟಿ ಕೋ ಅಪರೇಟಿವ್ ಸೊಸೈಟಿಯ ಮಾಲಕನನ್ನು ಒಡಿಶಾದಲ್ಲಿ ಬಂಧಿಸಿ ರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಇರುವ ಸಂಸ್ಥೆಯ ಕಚೇರಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೇಖರ್ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ಶರಣಪ್ಪ, ಎಲ್ಲಾ ತಾಲೂಕು ಕೇಂದ್ರಗಳಲ್ಲಿರುವ ಇಂತಹ ಕಂಪೆನಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಠಾಣಾ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಕೂಡಾ ಇಂತಹ ಮೋಸದ ಕಂಪೆನಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.

ತಿಂಗಳ ಮೊದಲ ಮಂಗಳವಾರ ಸಭೆ
ಈ ಹಿಂದೆ ಪ್ರತಿ ತಿಂಗಳ ಪ್ರಥಮ ರವಿವಾರಂದು ನಡೆಸಲಾಗುತ್ತಿದ್ದ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ದಲಿತರ ಕುಂದುಕೊರತೆಗಳ ಮಾಸಿಕ ಸಭೆಯನ್ನು ಇದೀಗ ತಿಂಗಳ ಮೊದಲ ಮಂಗಳವಾರ ನಡೆಸಲಾಗುತ್ತಿದೆ. ಸಭೆಯಲ್ಲಿ ಸಮಾಜ ಕಲ್ಯಾಣ, ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲು ಅನುಕೂಲವಾಗುವಂತೆ ಈ ಬದಲಾವಣೆ ಮಾಡಲಾಗಿದೆ.
-ಡಾ.ಶರಣಪ್ಪ, ದ.ಕ.ಜಿಲ್ಲಾ ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News