ಗಪ್ಟಿಲ್ ಶತಕ ; ಕಿವೀಸ್‌ಗೆ ಸರಣಿ ಜಯ
ವೌಂಟ್ ವೌಂಗನುಯಿ, ಜ.5: ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ದಾಖಲಿಸಿದ 102 ರನ್‌ಗಳ ಸಹಾಯದಿಂದ ನ್ಯೂಝಿಲೆಂಡ್ ತಂಡ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧ ಐದನೆ ಹಾಗೂ ಅಂತಿಮ ಪಂದ್ಯದಲ್ಲಿ 36 ರನ್‌ಗಳ ಜಯ ಗಳಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಗೆಲುವಿಗೆ 295 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ ಮ್ಯಾಟ್ ಹೆನ್ರಿ(5-40) ಮತ್ತು ಟ್ರೆಂಟ್ ಬೌಲ್ಟ್(3-43) ದಾಳಿಗೆ ಸಿಲುಕಿ 47.1 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟಾಯಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ತಂಡ 216 ನಿಮಿಷಗಳ ಬ್ಯಾಟಿಂಗ್‌ನಲ್ಲಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 294 ರನ್ ಗಳಿಸಿತ್ತು.
ಶ್ರೀಲಂಕಾ ತಂಡಕ್ಕೆ ಸವಾಲು ಕಠಿಣವಾಗಿರಲಿಲ್ಲ. ಅದು ಗೆಲುವಿನ ಕಡೆಗೆ ಹೆಜ್ಜೆ ಇರಿಸಿತ್ತು. ಅಂತಿಮ ಮೂರು ವಿಕೆಟ್‌ಗಳು 6 ರನ್‌ಗಳಿಗೆ ಉರುಳಿದವು. ಇದರಿಂದಾಗಿ ಶ್ರೀಲಂಕಾ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್ ಮತ್ತು ಮಿಲಂದಾ ಸಿರಿವರ್ಧನಾ ಆಕರ್ಷಕ ಬ್ಯಾಟಿಂಗ್‌ನ ಮೂಲಕ ತಂಡದ ಗೆಲುವಿಗೆ ಹೋರಾಟ ನಡೆಸಿದ್ದರು.
ಶ್ರೀಲಂಕಾದ ಆರಂಭ ಚೆನ್ನಾಗಿರಿಲ್ಲ. 9.1 ಓವರ್‌ಗಳಲ್ಲಿ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗ ಗುಣತಿಲಕ (15) , ದಿಲ್ಶನ್(5) ಮತ್ತು ತಿರುಮನ್ನೆ(2) ಬೇಗನ ಔಟಾದರು. ನಾಯಕ ಮ್ಯಾಥ್ಯೂಸ್ ಮತ್ತು ಚಾಂಡಿಮಾಲ್ ನಾಲ್ಕನೆ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ನೀಡಿದ್ದರು. ಈ ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ ಬೌಲ್ಟ್ ಅವರು 50 ರನ್ ಗಳಿಸಿದ ಚಾಂಡಿಮಾಲ್‌ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಜೊತೆಯಾಟವನ್ನು ಮುರಿದರು.
29.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿದ್ದ ಶ್ರೀಲಂಕಾ ತಂಡ ಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ತಿಸ್ಸರ ಪೆರೆರಾ(15) ವಿಫಲರಾದರು. ಆರನೆ ವಿಕೆಟ್‌ಗೆ ಮ್ಯಾಥ್ಯೂಸ್ ಮತ್ತು ಸಿರಿವರ್ಧನ 40 ಎಸೆತಗಳಲ್ಲಿ 62 ರನ್ ಕಬಳಿಸಿದರು. 5 ವಿಕೆಟ್ ನಷ್ಟದಲ್ಲಿ 223 ರನ್ ಮಾಡಿದ್ದ ಶ್ರೀಲಂಕಾ ತಂಡ ಮುಂದೆ 9 ಓವರ್‌ಗಳಲ್ಲಿ 72 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ 39 ರನ್ ಗಳಿಸಿದ ಸಿರಿವರ್ಧನ ಔಟಾದ ಬಳಿಕ ನ್ಯೂಝಿಲೆಂಡ್ ಮೇಲುಗೈ ಸಾಧಿಸಿತು. ನಾಯಕ ಮ್ಯಾಥ್ಯೂಸ್ 156 ನಿಮಿಷಗಳ ಬ್ಯಾಟಿಂಗ್‌ನಲ್ಲಿ 116 ಎಸೆತಗಳನ್ನು ಎದುರಿಸಿ 6ಬೌಂಡರಿಗಳ ಸಹಾಯದಿಂದ 95 ರನ್ ಗಳಿಸಿ ಶತಕ ವಂಚಿತಗೊಂಡರು.ಚಾಂಡಿಮಾಲ್ 50 ರನ್ ಗಳಿಸಿದರು.
ಗಪ್ಟಿಲ್ ಶತಕ: ನ್ಯೂಝಿಲೆಂಡ್‌ನ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ 10ನೆ ಶತಕ ದಾಖಲಿಸಿದರು. 157 ನಿಮಿಷಗಳ ಬ್ಯಾಟಿಂಗ್‌ನಲ್ಲಿ 109 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 102 ರನ್ ಗಳಿಸಿ ಔಟಾದರು.
ಈ ಸರಣಿಯಲ್ಲಿ ಗಪ್ಟಿಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಪಂದ್ಯಗಳಲ್ಲಿ ಅವರು 79 ರನ್, ಔಟಾಗದೆ 93ರನ್, 30 ಮತ್ತು 27 ರನ್ ಗಳಿಸಿದ್ದರು.
ನ್ಯೂಝಿಲೆಂಡ್ ಬ್ಯಾಟಿಂಗ್‌ಗೆ ಇಳಿದು ಮೊದಲ ಓವರ್‌ನಲ್ಲಿ ಆರಂಭಿಕ ದಾಂಡಿಗ ಲ್ಯಾಥಮ್ ಅವರನ್ನು ಕಳೆದುಕೊಂಡಿತು. ಬಳಿಕ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು.
ಗಪ್ಟಿಲ್ ಮತ್ತು ವಿಲಿಯಮ್ಸನ್ ಎರಡನೆ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ನೀಡಿದರು. ವಿಲಿಯಮ್ಸನ್(61) ಔಟಾದ ಬಳಿಕ ರಾಸ್ ಟೇಲರ್ ಕ್ರೀಸ್‌ಗೆ ಆಗಮಿಸಿದರು. ಟೇಲರ್ ಮತ್ತು ಗಪ್ಟಿಲ್ ತಂಡದ ಬ್ಯಾಟಿಂಗ್ ಮುಂದುವರಿಸಿ ಮೂರನೆ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು. ಇದರೊಂದಿಗೆ ತಂಡದ ಸ್ಕೋರ್ 38 ಓವರ್‌ಗಳಲ್ಲಿ 206ಕ್ಕೆ ಏರಿತು. ಗಪ್ಟಿಲ್ ಶತಕ ದಾಖಲಿಸಿದ ಬಳಿಕ ಕ್ರೀಸ್‌ನಲ್ಲಿ ಬಹಳ ಹೊತ್ತು ನಿಲ್ಲಲಿಲ್ಲ.
ಟೇಲರ್ 103 ನಿಮಿಷಗಳ ಬ್ಯಾಟಿಂಗ್‌ನಲ್ಲಿ 67 ಎಸೆತಗಳನ್ನು ಎದುರಿಸಿದರು. 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 61 ರನ್ ಸೇರಿಸಿ ನಿರ್ಗಮಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ನ್ಯೂಝಿಲೆಂಡ 50 ಓವರ್‌ಗಳಲ್ಲಿ 294/5(ಗಪ್ಟಿಲ್ 102, ವಿಲಿಯಮ್ಸನ್61, ರಾಸ್ ಟೇಲರ್ 61; ಕುಲಸೇಕರ 3-53).
ಶ್ರೀಲಂಕಾ 47.1 ಓವರ್‌ಗಳಲ್ಲಿ ಆಲೌಟ್ 258( ಮ್ಯಥ್ಯೂಸ್ 95, ಚಾಂಡಿಮಾಲ್ 50, ಸಿರಿವರ್ಧನ 39; ಹೆನ್ರಿ 5-40, ಬೌಲ್ಟ್ 3-43).
ಪಂದ್ಯಶ್ರೇಷ್ಠ : ಮ್ಯಾಟ್ ಹೆನ್ರಿ