ಮೊದಲ ವಿಕೆಟ್‌ಗೆ 323 ರನ್ ಜೊತೆಯಾಟ!
95 ವರ್ಷ ಹಳೆಯ ದಾಖಲೆ ಮುರಿದ ಡೆವೊನ್ ಕಾನ್ವೆ-ಟಾಮ್ ಲ್ಯಾಥಮ್
Photo Credit : AP \ PTI
ಮೌಂಟ್ ಮೌಂಗನುಯಿ, ಡಿ.18: ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಗುರುವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಮೊದಲ ವಿಕೆಟ್ ಗೆ ದಾಖಲೆಯ ರನ್ ಜೊತೆಯಾಟ ನಡೆಸಿ ಸಂಪೂರ್ಣ ಪ್ರಾಬಲ್ಯ ಮೆರೆದಿದೆ.
ಟಾಸ್ ಜಯಿಸಿದ ನಂತರ ನ್ಯೂಝಿಲ್ಯಾಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ಡೆವೊನ್ ಕಾನ್ವೆ ಹಾಗೂ ಟಾಮ್ ಲ್ಯಾಥಮ್ ವೆಸ್ಟ್‌ಇಂಡೀಸ್‌ನ ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್‌ನ ಲಾಭ ಪಡೆದು ಮ್ಯಾರಥಾನ್ ಇನಿಂಗ್ಸ್ ಆಡಿದರು. ಎರಡು ದಿನಗಳ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಕಾನ್ವೆ ದಿನದಾಟದಂತ್ಯಕ್ಕೆ ಔಟಾಗದೆ 178 ರನ್(279 ಎಸೆತ, 25 ಬೌಂಡರಿ) ಗಳಿಸಿದರು. ನಾಯಕ ಲ್ಯಾಥಮ್ 137 ರನ್(246 ಎಸೆತ, 15 ಬೌಂಡರಿ, 1 ಸಿಕ್ಸರ್) ಗಳಿಸಿ ಕಾನ್ವೆಗೆ ಸಾಥ್ ನೀಡಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 323 ರನ್ ಜೊತೆಯಾಟ ನಡೆಸಿ ನೂತನ ದಾಖಲೆ ನಿರ್ಮಿಸಿದರು.
ನ್ಯೂಝಿಲ್ಯಾಂಡ್ ತಂಡವು ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ್ದು, ಲ್ಯಾಥಮ್ ಹಾಗೂ ಕಾನ್ವೇ ಅವರ ದಾಖಲೆಯ ಜೊತೆಯಾಟಕ್ಕೆ ಕೊನೆಗೂ ರೋಚ್ ತೆರೆ ಎಳೆದರು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇತಿಹಾಸದಲ್ಲಿ ಇದೊಂದು ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ. ಈ ವೇಳೆ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 317 ರನ್ ಜೊತೆಯಾಟ ನಡೆಸಿದ್ದ ಭಾರತ ತಂಡದ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ದಾಖಲೆಯನ್ನು ಮುರಿದರು. ಡಬ್ಲ್ಯುಟಿಸಿ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟ ನಡೆಸಿದ ದಾಖಲೆ ಇದೀಗ ಕಾನ್ವೆ ಹಾಗೂ ಲ್ಯಾಥಮ್ ಹೆಸರಲ್ಲಿದೆ.
ನ್ಯೂಝಿಲ್ಯಾಂಡ್ ಕ್ರಿಕೆಟ್ ಪಾಲಿಗೆ ಈ ಜೊತೆಯಾಟವು ಐತಿಹಾಸಿಕ ಮಹತ್ವ ಪಡೆದಿದೆ. ಕಾನ್ವೆ ಹಾಗೂ ಲ್ಯಾಥಮ್ ಸ್ವದೇಶದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟದಲ್ಲಿ ಭಾಗಿಯಾಗಿ 95 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದರು.
1930ರಲ್ಲಿ ವೆಲ್ಲಿಂಗ್ಟನ್ ನಲ್ಲಿ ಚಾರ್ಲ್ಸ್ ಸ್ಟೀವರ್ಟ್ ಹಾಗೂ ಜಾನ್ ಎರ್ನೆಸ್ಟ್ ಮಿಲ್ಸ್ ಮೊದಲ ವಿಕೆಟ್‌ಗೆ 276 ರನ್ ಸೇರಿಸಿದ್ದರು.
ನ್ಯೂಝಿಲ್ಯಾಂಡ್‌ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 323 ರನ್ ಕಿವೀಸ್‌ನ ಆರಂಭಿಕ ಜೋಡಿಯ ಎರಡನೇ ಗರಿಷ್ಠ ರನ್ ಜೊತೆಯಾಟವಾಗಿದೆ. 1972ರಲ್ಲಿ ಜಾರ್ಜ್‌ಟೌನ್‌ನಲ್ಲಿ ಗ್ಲೆನ್ ಟರ್ನರ್ ಹಾಗೂ ಟೆರ್ರಿ ಜಾರ್ವಿಸ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ 387 ರನ್ ಜೊತೆಯಾಟ ನಡೆಸಿದ್ದರು.
ನ್ಯೂಝಿಲ್ಯಾಂಡ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಟನೇ ಬಾರಿ 300ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದೆ. 34ರ ಹರೆಯದ ಕಾನ್ವೆ 147 ಎಸೆತಗಳಲ್ಲಿ 17 ಬೌಂಡರಿಗಳ ಸಹಾಯದಿಂದ ಕ್ಯಾಲೆಂಡರ್ ವರ್ಷದಲ್ಲಿ ತನ್ನ ಎರಡನೇ ಶತಕ ಹಾಗೂ ಒಟ್ಟಾರೆ ಆರನೇ ಶತಕ ಸಿಡಿಸಿದರು. 2022ರ ನಂತರ ಸ್ವದೇಶದಲ್ಲಿ ಮೊದಲ ಶತಕ ದಾಖಲಿಸಿದರು.
ಲ್ಯಾಥಮ್ 183 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ತನ್ನ 15ನೇ ಶತಕ ಪೂರೈಸಿದರು. ಲ್ಯಾಥಮ್ 104 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಟೆವಿನ್ ಇಮ್ಲಾಚ್ ರಿಂದ ಜೀವದಾನ ಪಡೆದರು.
ನ್ಯೂಝಿಲ್ಯಾಂಡ್ ತಂಡವು ಐದು ವರ್ಷಗಳ ನಂತರ ಸ್ವದೇಶಿ ಟೆಸ್ಟ್‌ನಲ್ಲಿ ಸ್ಪಿನ್ನರ್ ಅಜಾಝ್ ಪಟೇಲ್‌ಗೆ ಅವಕಾಶ ನೀಡಿತು. ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್ ಗಾಯದಿಂದ ಚೇತರಿಸಿಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ334/1
(ಟಾಮ್ ಲ್ಯಾಥಮ್ 137, ಡೆವೊನ್ ಕಾನ್ವೆ ಔಟಾಗದೆ 178, ಕೆಮರ್ ರೋಚ್ 1-63)