ಮಲ್ಪೆಬೀಚ್‌ನಲ್ಲಿ ಉಚಿತ ವೈಫೈ
ಉಡುಪಿ, ಜ.5: ಮಲ್ಪೆಕಡಲತೀರದಲ್ಲಿ ಜ.15ರಿಂದ ಪ್ರವಾಸಿ ಗರ ಅನುಕೂಲಕ್ಕೆ ಉಚಿತ ವೈಫೈ ಸೌಲಭ್ಯವನ್ನು ಜಿಲ್ಲಾ ಪ್ರವಾಸೋ ದ್ಯಮ ಇಲಾಖೆ ಒದಗಿಸಲಿದ್ದು, ಒಂದು ನಂಬರ್‌ಗೆ 1 ಗಂಟೆ ಕಾಲ ಉಚಿತ ವೈಫೈ ಸೌಲಭ್ಯ ಒದಗಿಸಲು ಬಿಎಸ್ಸೆನ್ನೆಲ್ ಸಜ್ಜಾಗಿದೆ.
ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆಯಲ್ಲಿ ಮಂಗಳ ವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಮತ್ತು ಮಲ್ಪೆಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಮೂರು ತಿಂಗಳಿಗೆ ಒಂದು ಲಕ್ಷ ರೂ.ಗಳನ್ನು ಬಿಎಸ್ಸೆನ್ನೆಲ್‌ಗೆ ಪಾವತಿಸಿದ್ದು, ಜ.15ರಿಂದ ಪ್ರವಾಸಿಗರು ಮಲ್ಪೆಬೀಚ್‌ನಲ್ಲಿ ಉಚಿತ ವೈಫೈ ಸೌಲಭ್ಯ ಪಡೆಯಬಹುದು ಎಂದರು.
ರಿಲಯನ್ಸ್ ಕಂಪೆನಿಯೂ ವೈಫೈ ಸೌಲಭ್ಯವನ್ನು ನೀಡಲು ಮುಂದಾಗಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಈಗಾಗಲೇ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಚ್ಛತೆ ಮತ್ತು ಸುರಕ್ಷೆಗೆ ಬೀಚ್‌ನಲ್ಲಿ ಆದ್ಯತೆ ನೀಡಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ವೆಬ್‌ಸೈಟ್ ನಿರ್ವಹಣೆಯನ್ನು ಇ-ಟೆಂಡರ್ ಮೂಲಕ ಒಮೆಗಾ ಸೊಲೂಷನ್ಸ್‌ಗೆ ಹಸ್ತಾಂತರಿಸಲಾಗಿದೆ ಎಂದವರು ಹೇಳಿದರು.
ಒಟ್ಟು 9.13 ಕೋಟಿ ರೂ. ಅನುದಾನದಡಿ ಪಡುಬಿದ್ರೆ, ತ್ರಾಸಿ, ಮರವಂತೆ, ಕಾಪು, ಒತ್ತಿನೆಣೆ ಬೀಚ್‌ನಲ್ಲಿ ಮೂಲಭೂತ ಸೌಕರ್ಯ ಮತ್ತು ರಸ್ತೆಗಾಗಿ ಕೆಆರ್‌ಐಡಿಎಲ್‌ಗೆ ನೀಡಿದ್ದು, ಕಾಮಗಾರಿಗಳ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು.
ಮಲ್ಪೆಬೀಚ್ ಬಳಿ ಬೋಟ್ ಜೆಟ್ಟಿ ನಿರ್ಮಾಣ ಕಾಮಗಾರಿ ಯಲ್ಲಿ ಉಳಿದ 33 ಲಕ್ಷ ರೂ.ಗಳಲ್ಲಿ ಹೈಮಾಸ್ಟ್ ದೀಪ, ಇಂಟರ್ ಲಾಕ್, ಟಿಕೆಟ್ ಕೌಂಟರ್, ಗಜೊಬೊ ಮಾದರಿಯಲ್ಲಿ ಪ್ರವಾಸಿ ಗರಿಗೆ ನೆರಳಿನ ವ್ಯವಸ್ಥೆ ಮಾಡಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಪ್ರವಾಸಿ ಟ್ಯಾಕ್ಸಿ ನೀಡಲು 33 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಈ ಪ್ರವಾಸಿ ಟ್ಯಾಕ್ಸಿಗಳು ಪ್ರವಾಸಿ ಸೇವೆಗೆ ಬಳಕೆಯಾಗುವುದನ್ನು ಖಾತರಿ ಪಡಿಸಕೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂಬಂಧ ವಾರ್ಷಿಕ ತಪಾಸಣೆ ನಡೆಸಲು ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೂಡ್ಲು ತೀರ್ಥದಲ್ಲಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಪಡೆದು ಸುರಕ್ಷಾ ವ್ಯವಸ್ಥೆ ಏರ್ಪಡಿಸಲು ವೈಲ್ಡ್‌ಲೈಫ್‌ನವರಿಗೆ ಸೂಚಿಸಲು ಜಿಲ್ಲಾಧಿಕಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಅಕ್ರಮ ಗೂಡಂಗಡಿಗಳ ಬಗ್ಗೆ, ಸ್ವಚ್ಛತೆ ಪಾಲಿಸದಿರುವ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅನುಮತಿ ರದ್ದುಪಡಿಸಿ ಎಂದು ಡಾ.ವಿಶಾಲ್ ನಗರಸಭೆ ಆಯುಕ್ತ ಮಂಜುನಾಥಯ್ಯರಿಗೆ ಸೂಚಿಸಿದರು.
ಸಭೆಯಲ್ಲಿ ನಾಗರಾಜ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಬೀಚ್ ಅಭಿವೃದ್ಧಿ ವಹಿಸಿಕೊಂಡಿರುವ ಸುಧೇಶ್, ಯತೀಶ್ ಬೈಕಂಪಾಡಿ ಹಾಗೂ ಕೆನರಾ ಚೇಂಬರ್ಸ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.