×
Ad

ಮಂಗಳೂರು: ಆ್ಯಂಟನಿ ವೇಸ್ಟ್‌ನಿಂದ ತ್ಯಾಜ್ಯ ವಿಲೇವಾರಿ ಸ್ಥಗಿತ!

Update: 2016-01-06 00:11 IST

ಮನೆಗಳಿಂದ ಕಸ ಸಂಗ್ರಹವಾಗದೆ ಜನತೆ ಕಂಗಾಲು
ಮಂಗಳೂರು, ಜ.5: ಮನೆಮನೆ ಕಸ ಸಂಗ್ರಹ, ಮಾರುಕಟ್ಟೆ ಶುಚಿತ್ವ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ವಾರ್ಷಿಕ 17.62 ಕೋ.ರೂ.ಗಳ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈ. ಲಿ. ತನ್ನ ಕಾರ್ಯವನ್ನು ಸ್ಥಗಿತ ಗೊಳಿಸಿದೆ. ಇದರಿಂದಾಗಿ ಮನಪಾ ವ್ಯಾಪ್ತಿ ಯಲ್ಲಿ ಇಂದು ಮನೆಗಳಿಂದ ಕಸ ಸಂಗ್ರಹ ನಡೆಯದೆ, ಮತ್ತೆ ತ್ಯಾಜ್ಯ ನಿರ್ವಹಣೆ ಸಮಸ್ಯೆ ಎದುರಾಗಿದೆ. ಆರಂಭದಲ್ಲೇ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಒಪ್ಪಂದ ಹಾಗೂ ಕಾರ್ಯನಿರ್ವಹಣೆ ಅವೈಜ್ಞಾನಿಕ ಎಂಬ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪಗಳು ಕೇಳಿ ಬಂದಿದ್ದರೂ ಮನಪಾ ಆಡಳಿತ ಮಾತ್ರ ಕಂಪೆನಿ ಜತೆ ಏಳು ವರ್ಷಗಳ ಒಪ್ಪಂದ ಮಾಡಿಕೊಂಡು ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಟ್ಟಿತ್ತು. ಇದೀಗ ಮನಪಾ ದಿಂದ ಸುಮಾರು 10 ಕೋ.ರೂ. ಬಾಕಿ ಇರುವ ಹಿನ್ನೆಲೆಯಲ್ಲಿ ಕಂಪೆನಿ ತನ್ನ ಕಾರ್ಯ ವನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಮನಪಾ ಮತ್ತು ಗುತ್ತಿಗೆದಾರರ ನಡುವೆ ಇಂದು ನಡೆದ ಸಭೆಯೂ ವಿಫಲಗೊಂಡಿದೆ. ಮನಪಾ ಆಡಳಿತ ಹಾಗೂ ಕಂಪೆನಿಯ ನಡುವಿನ ಒಪ್ಪಂದ ದಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಜೊತೆ ತ್ಯಾಜ್ಯ ನಿರ್ವಹಣೆಯ ಕರವನ್ನೂ ನೀಡುತ್ತಿರುವ ನಗರದ ಜನತೆ ಮಾತ್ರ ಕಂಗಾಲಾಗಿದ್ದಾರೆ. ಕಂಪೆನಿ ಮತ್ತು ಮನಪಾದ ನಡುವಿನ ಒಪ್ಪಂ ದದ ಪ್ರಕಾರ ಮಾಸಿಕ 160- 180 ಟನ್ ಕಸ ಸಂಗ್ರಹದ ಬಗ್ಗೆ ಟೆಂಡರ್‌ನಲ್ಲಿ ಸೂಚಿಸಲಾಗಿತ್ತು. ಅದರಂತೆ ಮಾಸಿಕ 1.25 ಕೋ.ರೂ. ಬಿಲ್ ಪಾವತಿ ಆಗಬೇಕು. ಆದರೆ ಪ್ರಸ್ತುತ ಕಸ ಸಂಗ್ರಹ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗುತ್ತಿದ್ದು, ಇದರಿಂದ ಮಾಸಿಕ ಬಿಲ್ 2.5 ಕೋ.ರೂ. ಆಗುತ್ತಿದೆ. ಇದು ಪಾಲಿಕೆಯ ಪಾಲಿಗೆ ನುಂಗಲಾರದ ತುತ್ತಾಗಿದೆ.
ಮಂಗಳವಾರದಿಂದಲೇ ನಗರದ ಮಾರು ಕಟ್ಟೆ ಹಾಗೂ ಜಂಕ್ಷನ್‌ಗಳಲ್ಲಿರುವ ತೊಟ್ಟಿಗಳಲ್ಲಿ ಕಸ ತುಂಬಿ ಹೋಗಿವೆ.ಆ್ಯಂಟನಿ ವೇಸ್ಟ್ ಕಂಪೆನಿ ಗುತ್ತಿಗೆ ಪಡೆದುಕೊಂಡು ಕೆಲಸ ಆರಂಭಿಸಿದ ಬಳಿಕ ನಗರದ ಎಲ್ಲ ಕಸದ ತೊಟ್ಟಿಗಳನ್ನು ತೆರವು ಮಾಡಲಾಗಿತ್ತು. ಬಹುತೇಕ ಎಲ್ಲೆಡೆ ಮನೆಮನೆ ಕಸ ಸಂಗ್ರಹ ಆರಂಭವಾಗಿತ್ತು. ತೆರಿಗೆಯಲ್ಲಿ ಇದರ ಹಣ ಸಂಗ್ರಹ ಮಾಡುವ ಕಾರಣ, ಪ್ರತಿ ತಿಂಗಳು ಕಸದವರಿಗೆ ಹಣ ಕೊಡುವ ಕಿರಿಕಿರಿ ಇರಲಿಲ್ಲ. ಆದರೆ ಇದೀಗ ಕಸ ಹಾಕಲು ಕಸದ ತೊಟ್ಟಿಯೂ ಇಲ್ಲದೆ, ಕಸ ಸಂಗ್ರಹವೂ ಆಗದೆ ಸಾರ್ವಜನಿಕರು ಪರದಾಡುವಂತಾಗಿದೆ.
ಆ್ಯಂಟನಿ ಕಂಪೆನಿ 2015ರ ೆಬ್ರವರಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಚಾಲನೆ ನೀಡಿದ್ದು, ಇದಕ್ಕಾಗಿ ಇಷ್ಟರವರೆಗೆ ಮನಪಾದಿಂದ 15.13 ಕೋಟಿ ರೂ. ಪಾವತಿ ಮಾಡಲಾಗಿದೆ. ಆದರೆ ಕಂಪೆನಿ ಪ್ರಕಾರ ಡಿಸೆಂಬರ್ ತನಕ ತಡೆಹಿಡಿದ ಮೊತ್ತ ಸೇರಿದಂತೆ ಒಟ್ಟು ಸುಮಾರು 10 ಕೋ. ರೂ. ಬಿಲ್ ಪಾವತಿಯಾಗಬೇಕಿದೆ. ಈ ಬಗ್ಗೆ ಮನಪಾಕ್ಕೆ ಪತ್ರ ಬರೆದಿರುವ ಕಂಪೆನಿ, ಬಾಕಿ ಮೊತ್ತ ಪಾವತಿಯಾಗದೆ ಕಸ ಸಂಗ್ರಹಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದೆ. ಕಸ ವಿಲೇವಾರಿ ಸ್ಥಗಿತ ಹಿನ್ನೆಲೆಯಲ್ಲಿ ಮಂಗಳವಾರ ಪಾಲಿಕೆಯಲ್ಲಿ ಉಪಮೇಯರ್ ನೇತೃತ್ವದಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸಚೇತಕರು, ಹಿರಿಯ ಕಾರ್ಪೊ ರೇಟರ್‌ಗಳು, ಉಪ ಆಯುಕ್ತರು, ಅಧಿಕಾರಿ ಗಳು ಮತ್ತು ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್‌ನ ಯೋಜನಾ ನಿರ್ದೇಶಕರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು.
 ‘‘ತ್ಯಾಜ್ಯ ಸಾಗಾಟದ ವಾಹನ ಮತ್ತಿತರ ವ್ಯವಸ್ಥೆಗೆ ಸುಮಾರು 30 ಕೋಟಿ ರೂ. ಹೂಡಿಕೆ, 6 ಕೋ.ರೂ. ಬ್ಯಾಂಕ್ ಖಾತ್ರಿ ನೀಡಿರುವ ಕಂಪೆನಿಯಿಂದ ಮಂಗಳೂರಿನಲ್ಲಿ 958 ಕಾರ್ಮಿಕರು ದುಡಿಯುತ್ತಿದ್ದು, 131 ವಾಹನ ಬಳಸಲಾಗುತ್ತಿದೆ. ಒಪ್ಪಂದದ ಪ್ರಕಾರ ಪ್ರತಿ ತಿಂಗಳ 5ರಂದು ಬಿಲ್ ಪಾವತಿ ಮಾಡ ಬೇಕು. ಆದರೆ ನಮಗೆ ಬಿಲ್ ಪಾವತಿ ಆಗದ ಕಾರಣ, ಅನಿವಾರ್ಯವಾಗಿ ತ್ಯಾಜ್ಯ ನಿರ್ವ ಹಣೆ ಸ್ಥಗಿತಗೊಳಿಸಿದ್ದೇವೆ’’ ಎಂದು ಕಂಪೆನಿಯ ಯೋಜನಾ ನಿರ್ದೇಶಕ ಹರಿದಾಸ್ ತಿಳಿಸಿದರು. ಪಾಲಿಕೆ ಅಧಿಕಾರಿ ಮಾತನಾಡಿ, ಗುತ್ತಿಗೆ ದಾರರು ಒಪ್ಪಂದಂತೆ ಕಸ ಗುಡಿಸಲು ಯಂತ್ರ ಗಳನ್ನು ಬಳಸಿಲ್ಲ. ಚರಂಡಿ ಮಣ್ಣು ತೆಗೆದಿಲ್ಲ. ಕುರುಚಲು ಹುಲ್ಲುಗಳನ್ನು ಕತ್ತರಿಸಿಲ್ಲ. ಅದಲ್ಲದೆ ಅಕ್ಟೋಬರ್‌ವರೆಗೆ ಬಿಲ್ ಪಾವತಿಸಲಾಗಿದೆ. ತಡೆ ಹಿಡಿದ ಬಿಲ್ ಸೇರಿದಂತೆ ಸ್ವಲ್ಪ ಬಿಲ್ ಮಾತ್ರ ಬಾಕಿ ಇದೆ. ಹೀಗಿರುವಾಗ ಕೆಲಸ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ವಾದಿಸಿದರು. ಇದನ್ನು ಆಕ್ಷೇಪಿಸಿದ ಹರಿದಾಸ್, ದಾಖಲೆ ಇಟ್ಟು ಮಾಹಿತಿ ಕೊಡಿ. ನಮ್ಮ ಬಿಲ್, ನೀವು ಪಾವತಿಸಿದ ಹಣ, ಬಾಕಿ ಇಟ್ಟಿರುವ ಹಣ, ತಡೆ ಹಿಡಿದಿರುವುದು ಎಲ್ಲವನ್ನೂ ಸಭೆಯ ಮುಂದಿಡಿ. ಆಗ ಸತ್ಯಾಂಶ ತಿಳಿಯುತ್ತದೆ. ಬಾಕಿ ಹಣ ಪಾವತಿ ಮಾಡದೆ ಕೆಲಸ ಆರಂಭಿಸುವ ಪ್ರಶ್ನೆಯೇ ಇಲ್ಲ ಎಂದರು. ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಮಾತನಾಡಿ, ಏಕಾಏಕಿ ತ್ಯಾಜ್ಯ ನಿರ್ವಹಣೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ. ಶಾಸಕರು, ಆಯುಕ್ತರ ಜತೆ ಚರ್ಚಿಸಿ ಕೈಗೊಂಡ ನಿರ್ಣಯದಂತೆ ಸಂಜೆಯ ವೇಳೆ ಒಂದು ಕೋ.ರೂ. ಬಿಡುಗಡೆ ಮಾಡಲಾಗುವುದು. ಉಳಿದ ಮೊತ್ತದಲ್ಲಿ 5 ಕೋಟಿ ರೂ. ಮೊತ್ತವನ್ನು ಕಂಪೆನಿಯ ಸಿಇಒ ಜತೆ ಚರ್ಚಿಸಿ 15 ದಿನದಲ್ಲಿ ಪಾವತಿ ಮಾಡಲಾಗುವುದು ಎಂದರು.
 ಆದರೆ ಇದಕ್ಕೊಪ್ಪದ ಕಂಪೆನಿಯ ಅಧಿಕಾರಿ, ನಮಗೆ ಕನಿಷ್ಠ 6 ಕೋಟಿ ರೂ. ಪಾವತಿ ಮಾಡಲೇಬೇಕು. ಇನ್ನು ವಿಳಂಬ ಮಾಡುತ್ತಾ ಹೋದರೆ ಪ್ರತಿ ತಿಂಗಳು ಎರಡೆರಡು ಕೋ.ರೂ. ಹೆಚ್ಚಾಗಲಿದೆ ಎಂಬ ಎಚ್ಚರಿಕೆಯನ್ನೂ ಮನಪಾಕ್ಕೆ ನೀಡಿದರು. ಈ ನಡುವೆ, ಅವರಿಗೆ ಸಾಧ್ಯವಿಲ್ಲ ಎಂದಾ ದರೆ ಬಿಟ್ಟು ಹೋಗಲಿ. ನಮ್ಮಲ್ಲಿ ಹಳೆಯ ಕಾರ್ಮಿಕರಿದ್ದು ಅವರಿಂದ ನಾಳೆಯೇ ಕೆಲಸ ಮಾಡಿಸಬಹುದು ಎಂಬ ಅಭಿಪ್ರಾಯವೂ ಮನಪಾದ ಕೆಲ ಸದಸ್ಯರಿಂದ ವ್ಯಕ್ತವಾಯಿತು. ದೀರ್ಘಾವಧಿಯ ಚರ್ಚೆಯ ಬಳಿಕವೂ ಯಾವುದೇ ನಿರ್ಧಾರವಿಲ್ಲದೆ ಸಭೆ ಕೊನೆಗೊಂ ಡಿತು. ಸಭೆಯನ್ನು ಮನಪಾ ವಿಪಕ್ಷವಾದ ಬಿಜೆಪಿ ಸದಸ್ಯರು ಬಹಿಷ್ಕರಿಸಿದ್ದರು.
ಒಪ್ಪಂದದ ಪ್ರಕಾರ ಸಂಗ್ರಹವಾದ ಟನ್‌ಗಟ್ಟಲೆ ಕಸಕ್ಕೆ ತಕ್ಕಂತೆ ಬಿಲ್ ಮಾಡುವ ಆಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿ, ಒಪ್ಪಂದದಲ್ಲಿ ವಿಧಿಸಲಾಗಿರುವ ಇತರ ನಿಯಮ ಗಳನ್ನು ಮಾತ್ರ ಪಾಲಿಸುತ್ತಿಲ್ಲ. ನಿಯಮದ ಪ್ರಕಾರ ಮನೆಗಳು, ಹೊಟೇಲ್‌ಗಳ ಕಸವನ್ನು ಒಣ ಮತ್ತು ಹಸಿ ಎಂದು ವಿಂಗಡಿಸಿ ಸಂಗ್ರಹಿಸಬೇಕು. ಮಾತ್ರವಲ್ಲದೆ, ಮುಚ್ಚಿದ ಲಾರಿ ಗಳಲ್ಲೇ ಸಂಗ್ರಹಿಸಿ ಸಾಗಿಸಬೇಕು. ಬಹುತೇಕ ವಾರ್ಡ್‌ಗಳಲ್ಲಿ ಒಣ ಹಾಗೂ ಹಸಿ ಕಸ ಒಟ್ಟಿಗೇ ಸಂಗ್ರಹಿಸಿ, ತೆರೆದ ಸಣ್ಣ ವಾಹನಗಳ ಮೂಲಕ ಸಾಗಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಮನಪಾ ಸದಸ್ಯರಿಂದ ಹಲವು ಬಾರಿ ಆರೋಪ, ಆಕ್ಷೇಪಗಳು ವ್ಯಕ್ತವಾಗಿದ್ದರೂ ಕಂಪೆನಿ ಮಾತ್ರ ಅತ್ತ ಗಮನಹರಿಸಿಯೇ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News