ಇರಾನ್‌ನಿಂದ ರಾಯಭಾರಿಯನ್ನು ಹಿಂದಕ್ಕೆ ಪಡೆದ ಕುವೈತ್

Update: 2016-01-06 18:05 GMT

ರಿಯಾದ್ (ಸೌದಿ ಅರೇಬಿಯ), ಜ. 6: ಸೌದಿ ಅರೇಬಿಯ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಕುವೈತ್ ತನ್ನ ಇರಾನ್ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ ಹಾಗೂ ಬಹರೈನ್ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಕಳವಳದ ಹಿನ್ನೆಲೆಯಲ್ಲಿ ಇರಾನ್‌ನೊಂದಿಗಿನ ತನ್ನ ವಾಯು ಸಂಪರ್ಕವನ್ನು ಕಡಿದುಕೊಂಡಿದೆ.
ಕಳೆದ ವಾರ ಟೆಹರಾನ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ, ತನ್ನ ಇರಾನ್ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದಾಗಿ ಕುವೈತ್ ಹೇಳಿದೆ.
 ಪ್ರಮುಖ ಶಿಯಾ ಧಾರ್ಮಿಕ ನಾಯಕರೊಬ್ಬರ ಮರಣ ದಂಡನೆ ಜಾರಿಗೊಳಿಸಿದ ಸೌದಿ ಅರೇಬಿಯದ ಕ್ರಮವನ್ನು ಪ್ರತಿಭಟಿಸಿ ಇರಾನ್‌ನಲ್ಲಿ ಪ್ರತಿಭಟನಕಾರರು ಸೌದಿ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ್ದರು.
ಈ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಲವಾಗಿ ಖಂಡಿಸಿದ ಬಳಿಕ ಕುವೈತ್ ಈ ಕ್ರಮ ತೆಗೆದುಕೊಂಡಿದೆ.
ಸುನ್ನಿ ಪ್ರಾಬಲ್ಯದ ಸೌದಿ ಅರೇಬಿಯ ಮತ್ತು ಶಿಯಾ ಪ್ರಾಬಲ್ಯದ ಇರಾನ್‌ಗಳ ನಡುವೆ ಈ ವಾರ ಪೂರ್ಣ ಪ್ರಮಾಣದ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದ್ದು, ಪ್ರಾದೇಶಿಕ ಸ್ಥಿರತೆಯ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News