×
Ad

ಕಪ್ಪುಹಣ: 2,428 ಕೋ.ರೂ.ತೆರಿಗೆ ಸಂಗ್ರಹ

Update: 2016-01-06 23:42 IST

ಹೊಸದಿಲ್ಲಿ,ಜ.6: ಕಳೆದ ವರ್ಷ ಅಂತ್ಯಗೊಂಡ, ಕಪ್ಪುಹಣ ಹೊಂದಿದವರಿಗೆ ಸೂಕ್ತ ತೆರಿಗೆ ಮತ್ತು ದಂಡ ಪಾವತಿಯೊಂದಿಗೆ ಅದನ್ನು ಘೋಷಿಸಿಕೊಳ್ಳಲು ಸರಕಾರವು ನೀಡಿದ್ದ ಒಂದು ಬಾರಿಯ ಅವಕಾಶವು ತೆರಿಗೆಯ ರೂಪದಲ್ಲಿ ಬೊಕ್ಕಸಕ್ಕೆ 2,428 ಕೋ.ರೂ. ಆದಾಯವನ್ನು ತಂದು ಕೊಟ್ಟಿದೆ. ಒಟ್ಟು 644 ಘೋಷಣೆಗಳನ್ನು ಸರಕಾರವು ಸ್ವೀಕರಿಸಿದ್ದು, ತನ್ಮೂಲಕ 4,164 ಕೋಟಿ ರೂ. ಕಪ್ಪುಹಣದ ಘೋಷಣೆಯಾಗಿತ್ತು.
ಡಿ.31ರವರೆಗೆ ತೆರಿಗೆ ಮತ್ತು ದಂಡದ ರೂಪದಲ್ಲಿ 2,428 ಕೋ.ರೂ.ಸಂಗ್ರಹವಾಗಿದೆಯೆಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
ಕೆಲವು ಪ್ರಕರಣಗಳಲ್ಲಿ ಘೋಷಣೆಗಳನ್ನು ಸಲ್ಲಿಸಿದವರು ಕಪ್ಪುಹಣವನ್ನು ಹೊಂದಿದ್ದಾರೆಂಬ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಮೊದಲೇ ಇದ್ದರಿಂದ ಅಂತಹವರ ಘೋಷಣೆಗಳನ್ನು ಸ್ವೀಕರಿಸಲಾಗಿಲ್ಲ, ಅಲ್ಲದೆ ಕೆಲವು ಹಣಪಾವತಿಗಳು ಕೊನೆಯ ಗಡುವಾದ ಡಿಸೆಂಬರ್ 31ರ ಬಳಿಕ ಬಂದಿವೆ. ಹೀಗಾಗಿ ನಿರೀಕ್ಷಿತ ತೆರಿಗೆ ಸಂಗ್ರಹದಲ್ಲಿ ಕೊರತೆ ಕಂಡು ಬಂದಿದೆ ಎಂದು ಅದು ತಿಳಿಸಿದೆ.
ಕಪ್ಪುಹಣದ ಘೋಷಣೆಗೆ ಸರಕಾರವು ನೀಡಿದ್ದ ಒಂದು ಬಾರಿಯ ಗಡುವು 2015,ಸೆ.30ಕ್ಕೆ ಅಂತ್ಯಗೊಂಡಿದ್ದು, ಕಪ್ಪುಹಣವನ್ನು ಹೊಂದಿದವರು ಶೇ.30 ತೆರಿಗೆ ಮತ್ತು ಶೇ.30 ದಂಡವನ್ನು 2015,ಡಿ.31ರೊಳಗೆ ಪಾವತಿಸಬೇಕಾಗಿತ್ತು. ಸರಕಾರವು 2015,ಜುಲೈ 1ರಂದು ಜಾರಿಗೊಳಿಸಿದ್ದ ಕಪ್ಪುಹಣ(ಬಹಿರಂಗಗೊಳಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಹೇರಿಕೆ ಕಾಯ್ದೆಯನ್ವಯ ಈ ಕಪ್ಪುಹಣವನ್ನು ಬಿಳಿಯಾಗಿಸಲು ಈ ಅವಕಾಶವನ್ನು ಕಲ್ಪಿಸಲಾಗಿತ್ತು.
ಈ ಅವಕಾಶವನ್ನು ಬಳಸಿಕೊಳ್ಳದ ಕಾಳಧನ ಹೊಂದಿರುವವರು ಶೇ.120 ರಷ್ಟು ತೆರಿಗೆ ಮತ್ತು ದಂಡವನ್ನು ಪಾವತಿಸುವ ಜೊತೆಗೆ 10ವರ್ಷಗಳವರೆಗೂ ವಿಸ್ತರಣೆಯಾಗಬಹುದಾದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News