×
Ad

ಕೈದಿಗಳಿಗೆ ಗಾಂಜಾ ಪೂರೈಕೆ ಆರೋಪ: ಇಬ್ಬರು ವಶಕ್ಕೆ

Update: 2016-01-07 00:04 IST

ಮಂಗಳೂರು, ಜ.6: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಬ್ಬರಿಗೆ ಗಾಂಜಾ ಪೂರೈಕೆ ಮಾಡಲೆತ್ನಿಸಿದ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

 ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಾದ ಹಾರಿಸ್ ಮತ್ತು ಅಲ್ತಾಫ್ ಎಂಬವರಿಗೆ ಬಟ್ಟೆ ಕೊಡಲೆಂದು ಕಸಬಾ ಬೆಂಗ್ರೆಯ ನಿವಾಸಿ ಝುಬೈದಾ (46) ಮತ್ತಾಕೆಯ ಮಗಳು ಮಿಸ್ರಿಯಾ (18) ಬಂದಿದ್ದರೆನ್ನಲಾಗಿದೆ. ಜೈಲು ಸಿಬ್ಬಂದಿ ಪುಟ್ಟಣ್ಣ ಆಚಾರಿ ಮತ್ತು ಜಯರಾಂ ಎಂಬವರು ಅವರು ತಂದಿದ್ದ ಬಟ್ಟೆಯಿದ್ದ ಪ್ಲಾಸ್ಟಿಕ್ ಚೀಲವನ್ನು ಮುಖ್ಯದ್ವಾರದಲ್ಲಿ ಸ್ಕಾನಿಂಗ್ ಮಾಡಿಸಿದಾಗ ಅದರೊಗಿದ್ದ ಜೀನ್ಸ್ ಪ್ಯಾಂಟ್‌ವೊಂದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಜೈಲು ಸಿಬ್ಬಂದಿ ಕೂಡಲೇ ಇದನ್ನು ಬರ್ಕೆ ಠಾಣಾ ಪೊಲೀಸರ ಗಮನಕ್ಕೆ ತಂದಿದ್ದು, ಅವರು ಇಬ್ಬರನ್ನೂ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ಈ ಬಟ್ಟೆಯನ್ನು ತಸ್ರೀಫ್ ಎಂಬಾತ ನೀಡಿದ್ದು, ಬಟ್ಟೆಯಲ್ಲಿ ಗಾಂಜಾ ಇರುವ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗಿದೆ. ವಶಪಡಿಸಿಕೊಂಡ ಗಾಂಜಾದ ತೂಕ 150 ಗ್ರಾಂ ಆಗಿದ್ದು, ಇದರ ವೌಲ್ಯ ಸುಮಾರು 3,000 ರೂ. ಎಂದು ಅಂದಾಜಿಸಲಾಗಿದೆ.

 ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News