ಅಖಿಲ ಭಾರತ ಅಂತರ್ ವಿವಿ ಬಾಲ್‌ಬ್ಯಾಡ್ಮಿಂಟನ್: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಚಾಂಪಿಯನ್ ಪಟ್ಟ
ಕೊಣಾಜೆ, ಜ.6: ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಕಳೆದ ಐದು ದಿನಗಳಿಂದ ನಡೆದ ಅಖಿಲಭಾರತ ಅಂತರ್ ವಿವಿ ಬಾಲ್‌ಬ್ಯಾಡ್ಮಿಂಟನ್ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಬುಧವಾರ ಚಾಂಪಿಯನ್ ಆಗಿ ಹೊರಹೊಮ್ಮಿತು.
ದ್ವಿತೀಯ ಪ್ರಶಸ್ತಿಯನ್ನು ಆದಿಕವಿ ನಾಣಯ್ಯ ವಿಶ್ವವಿದ್ಯಾನಿಲವು ಗಳಿಸಿದರೆ, ಅಣ್ಣಾ ವಿವಿ ಚೆನ್ನೈ ತೃತೀಯ ಮತ್ತು ಚತುರ್ಥ ಸ್ಥಾನ ವನ್ನು ಚೆನ್ನೈಯ ಎಸ್‌ಆರ್‌ಎಂ ವಿವಿ ಗಳಿಸಿತು. ಅಖಿಲಭಾರತ ಅಂತರ್ ವಿವಿ ಟೂರ್ನಿಯಲ್ಲಿ ಬೇರೆ ಬೇರೆ ರಾಜ್ಯದ ಒಟ್ಟು 70 ವಿಶ್ವವಿದ್ಯಾನಿಲಯದ ತಂಡಗಳು ಭಾಗವಹಿ ಸಿದ್ದವು.
ಲೀಗ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು ಆದಿಕವಿ ನಾಣಯ್ಯ ವಿವಿಯನ್ನು 29-20, 29-17ರಿಂದ ಹಾಗೂ ಚೆನ್ನೈಯ ಎಸ್‌ಆರ್‌ಎಂ ವಿವಿಯನ್ನು 29-28, 29-10ರಿಂದ ಮಣಿಸಿತು. ಇನ್ನೊಂದು ಲೀಗ್ ಪಂದ್ಯದಲ್ಲಿ ಅಣ್ಣಾ ವಿವಿಯು ಎಸ್‌ಆರ್‌ಎಂ ವಿವಿಯನ್ನು 29-19, 29-19, 29-28 ಹಾಗೂ ಆದಿಕವಿ ನಾಣಯ್ಯ ವಿವಿಯನ್ನು 29-24, 29-18 ಅಂಕಗಳಿಂದ ಸೋಲಿ ಸಿತು. ಆದಿಕವಿ ನಾಣಯ್ಯ ವಿವಿಯು ಚೆನ್ನೈಯ ಎಸ್‌ಆರ್‌ಎಂ ವಿವಿಯನ್ನು 29-23, 29-23ರಿಂದ ಸೋಲಿಸಿತು.
ಫೈನಲ್ ಲೀಗ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು ಅಣ್ಣಾ ವಿವಿ ತಂಡವನ್ನು 18-29, 29-19, 29-16ರಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ಬಾರಿ ಚೆನೈಯ ಎಸ್‌ಆರ್‌ಎಂ ವಿವಿಯು ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿತ್ತು. ಅಖಿಲಭಾರತ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬಾಡ್ಮಿಂಟನ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಟಿ.ಡಿ.ಕೆಂಪರಾಜು, ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟ ಯಶಸ್ವಿಯಾಗಿದ್ದು, ಈ ಯಶಸ್ಸು ಮಂಗಳೂರು ವಿವಿ ಇತಿಹಾಸದಲ್ಲಿ ಅವಿಸ್ಮರಣೀಯ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಾಜಿ ರಾಷ್ಟ್ರೀಯ ಬಾಡ್ಮಿಂಟನ್ ಆಟಗಾರ, ‘ಏಕಲವ್ಯ ಪ್ರಶಸ್ತಿ’ ಪುರಷ್ಕೃತ ವಿ.ಧ್ರುವ ಮಾತನಾಡಿ, ಕ್ರೀಡೆ ಶಿಕ್ಷಣದ ಭಾಗವಾಗಿರಬೇಕು. ಕ್ರೀಡೆ ಕೇವಲ ಮನೋರಂಜನೆ, ವ್ಯಾಯಾಮ ಮಾತ್ರವಲ್ಲದೆ ಉತ್ತಮ ಸಂಬಂಧ ಬೆಳೆಸುವಲ್ಲಿ ಸಹಾಯಕವಾಗುತ್ತದೆ.
ಸವಾಲುಗಳನ್ನು ಸ್ವೀಕರಿಸು ವುದನ್ನು ಹಾಗೂ ಸೋಲು ಗೆಲುವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕ್ರೀಡೆ ಕಲಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ, ಕುವೆಂಪು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಸ್.ಎಂ. ಪ್ರಕಾಶ್, ಮೈಸೂರು ವಿವಿಯ ನಿವೃತ್ತ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಿ. ಕೃಷ್ಣ, ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಕೂಟದ ಸಂಘಟನಾ ಕಾರ್ಯದರ್ಶಿ ಡಾ. ಕಿಶೋರ್‌ಕುಮಾರ್, ದೀಪಾ ಧ್ರುವ, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ಮಂಗಳೂರು ಮತ್ತು ಪಂದ್ಯದ ರೆಫ್ರಿ ಗೌಸ್ ಶರೀಫ್ ಉಪಸ್ಥಿತರಿದ್ದರು.