×
Ad

ಮಕ್ಕಳ ಪಾಲನಾ ಕೇಂದ್ರಗಳ ವಿವರ ಕ್ರೋಡೀಕರಿಸಲು ಡಿಸಿ ಸೂಚನೆ

Update: 2016-01-07 00:07 IST

ಮಂಗಳೂರು, ಜ.6: ಜಿಲ್ಲೆಯಲ್ಲಿರುವ ಅನಾಥಾಲಯ, ನಿರ್ಗತಿಕರ ಮಂದಿರ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳಿಗೆ ಆಶ್ರಯ ನೀಡುತ್ತಿರುವ ಎಲ್ಲಾ ಕೇಂದ್ರಗಳ ಸಮಗ್ರವಾದ ವಿವರ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಪಾಲನಾ ಸಂಸ್ಥೆಗಳ ಜಿಲ್ಲಾ ತನಿಖಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಪಾಲನಾ ಕೇಂದ್ರಗಳನ್ನು ಬಾಲನ್ಯಾಯ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಗಿಂದಾಗ್ಗೆ ಈ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಪ್ರತೀ ತಾಲೂಕುವಾರು ಅನಾಥಾಲಯ, ಮಕ್ಕಳ ಪಾಲನಾ ಕೇಂದ್ರಗಳ ಮಾಹಿತಿ ಸಂಗ್ರಹಿಸುವಂತೆ ಅವರು ತಿಳಿಸಿದರು.

ರಾಜ್ಯ ಸರಕಾರವು ಪ್ರತೀ ತಾಲೂಕಿನಲ್ಲಿ ತಾಲೂಕು ಮಕ್ಕಳ ರಕ್ಷಣಾ ಸಮಿತಿ ರಚಿಸಿದ್ದು, ಈ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಕ್ರಿಯಾಶೀಲವಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ 66 ಮಕ್ಕಳ ಪಾಲನಾ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 48 ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯಡಿ ನೋಂದಣಿಗೊಂಡಿದೆ. ಉಳಿದ ಸಂಸ್ಥೆಗಳ ನೋಂದಣಿಗೆ ನೋಟಿಸ್ ಜಾರಿಗೊಳಿಸಲಾಗಿದೆ. 23 ಸಂಸ್ಥೆಗಳಿಗೆ ತನಿಖಾ ಸಮಿತಿಯು ಭೇಟಿ ನೀಡಿದೆ ಎಂದು ಮಾಹಿತಿ ನೀಡಿದರು.

ವಿಶೇಷ ಪಾಲನಾ ಯೋಜನೆ: ಎಚ್.ಐ.ವಿ. ಸೋಂಕಿತ ಹಾಗೂ ಬಾಧಿತ ಮಕ್ಕಳು ಹಾಗೂ ಇಂತಹ ಕಾಯಿಲೆಯಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆ ನಿಮಿತ್ತ ವಿಶೇಷ ಪಾಲನಾ ಯೋಜನೆಯ ಅನುಷ್ಠಾನಗೊಳಿಸುವ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಹೆಚ್ಚುವರಿ ಮಕ್ಕಳಿಗೆ ಸೌಲಭ್ಯವನ್ನು ಕೊಡುವ ಬಗ್ಗೆ ಪ್ರಸ್ತಾಪ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ಈ ಯೋಜನೆಯಡಿ ಜಿಲ್ಲೆಯಲ್ಲಿ 2014-15ನೆ ಸಾಲಿನಲ್ಲಿ 412 ಫಲಾನುಭವಿಗಳಿಗೆ ಪೋಷನಾ ವೆಚ್ಚ ಜಮಾ ಮಾಡಲಾಗಿದೆ. ಹೆಚ್ಚುವರಿಯಾಗಿ 54 ಹೊಸ ಅರ್ಜಿಗಳು 2015-16ರಲ್ಲಿ ಸ್ವೀಕೃತವಾಗಿದೆ. ಇದಲ್ಲದೇ, ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಬಾಧಿತವಾಗಿರುವ 71 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಸಭೆಗೆ ಮಾಹಿತಿ ನೀಡಿದರು. ದ.ಕ. ಜಿಲ್ಲೆಯಲ್ಲಿ 1,657 ಎಚ್‌ಐವಿ ಬಾಧಿತ ಹಾಗೂ 526 ಸೋಂಕಿತರು ಸೇರಿದಂತೆ ಒಟ್ಟು 2,183 ಮಕ್ಕಳು ಇರುವುದಾಗಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮಾಹಿತಿ ನೀಡಿದೆ. ಈ ಪೈಕಿ 537 ಮಕ್ಕಳು ಸೌಲಭ್ಯ ಪಡೆದಿದ್ದಾರೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಎಸ್ಪಿ ವಿನ್ಸಂಟ್ ಶಾಂತಕುಮಾರ್, ಡಿಸಿಪಿ ಶಾಂತರಾಜು, ಮಹಿಳಾ ಮತ್ತು ಮಕ್ಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಖೇಶ್ ಶೆಟ್ಟಿ, ಬಾಲನ್ಯಾಯ ಮಂಡಳಿ ಸದಸ್ಯೆ ಶ್ರೀಲತಾ, ವೆನ್ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿದೇವಿ, ಮಕ್ಕಳ ರಕ್ಷಣಾ ಘಟಕದ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News