ದರೋಡೆ ಪ್ರಕರಣ: ಪೊಲೀಸರ ನಿರ್ಲಕ್ಷಕ್ಕೆ ಆಕ್ರೋಶ
ವಿಟ್ಲ, ಜ.6: ಬಿ.ಸಿ.ರೋಡ್ ಪೇಟೆಯಲ್ಲಿ ಹಾಡಹಗಲೇ ನಡೆದ ದರೋಡೆ ಪ್ರಕರಣದ ಆರೋಪಿಯನ್ನು ವಾರ ಕಳೆದರೂ ಬಂಧಿಸದ ಪೊಲೀಸರ ವಿರುದ್ಧ ತುಳು ರಕ್ಷಣಾ ವೇದಿಕೆಯ ದೇವಿಪ್ರಸಾದ್ ಶೆಟ್ಟಿ ವಾಮದಪದವು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಸಂಜೆ ಬಿ.ಸಿ.ರೋಡ್‌ನಲ್ಲಿ ಮಾತನಾಡಿದ ಅವರು ಡಿ.29 ರಂದು ಮೂಡುಪಡುಕೋಡಿ ನಿವಾಸಿ, ಗುತ್ತಿಗೆದಾರ ಮೋಹನ ಯಾನೆ ಮೋಹನ ಶೆಟ್ಟಿ ಬಿ.ಸಿ.ರೋಡು-ಕೈಕಂಬದ ವಿಟ್ಲ ಗ್ರಾಮೀಣಾಭಿವೃದ್ದಿ ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಚಿನ್ನಾರಣಗಳನ್ನು ವಾಪಸ್ ಪಡೆದು ತನ್ನ ಕಾರಿನಲ್ಲಿಟ್ಟು ತೆರಳಲು ಮುಂದಾಗುತ್ತಿದ್ದಂತೆಯೇ ಏಕಾಏಕಿ ಧಾವಿಸಿ ಬಂದ ನಾಲ್ವರು ಬಿ.ಸಿ. ರೋಡ್ ಸಮೀಪದ ಪೊನ್ನೋಡಿ ನಿವಾಸಿ ಸುಮಿತ್ ಆಳ್ವ ಎಂಬಾತನ ಹೆಸರೇಳಿಕೊಂಡು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿ ಕಾರಿನಲ್ಲಿದ್ದ 4 ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ಕಾರು ಸಹಿತ ದರೋಡೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಮೋಹನ್ ಶೆಟ್ಟಿ ನಗರ ಪೊಲೀಸರಿಗೆ ದೂರು ನೀಡಿ ವಾರ ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರಲ್ಲದೆ ವಾರದೊಳಗೆ ಪೊಲೀಸರು ಪ್ರಕರಣ ಭೇದಿಸದಿದ್ದಲ್ಲಿ ಜಿಲ್ಲಾ ಎಸ್ಪಿಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ದರೋಡೆ ಗೊಳಗಾದ ಮೋಹನ್ ಶೆಟ್ಟಿ ಹಾಗೂ ತುರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.