×
Ad

ಸಮಸ್ಯೆ ಇತ್ಯರ್ಥವಾಗದಿದ್ದರೆ ಕಾನೂನು ಕ್ರಮ: ಮನಪಾ

Update: 2016-01-07 00:16 IST

ಆ್ಯಂಟನಿ ಕಂಪೆನಿಯೊಂದಿಗೆ 15 ದಿನಗಳೊಳಗೆ ಮಾತುಕತೆ
 ಮಂಗಳೂರು, ಜ.6: ನಗರದಲ್ಲಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ಮನಪಾ ದಿಂದ ಅಕ್ಟೋಬರ್‌ವರೆಗೆ ಪಾವತಿ ಆಗ ಬೇಕಿರುವ ಬಾಕಿ ಮೊತ್ತ ಸುಮಾರು 2 ಕೋ.ರೂ. ಮಾತ್ರ. ಅದ ನ್ನೀಗ ಪಾವತಿಸಲಾಗುತ್ತಿದೆ. ಉಳಿದಂತೆ ಕಂಪೆನಿಯು ಕರಾರು ಒಪ್ಪಂದದ ಷರತ್ತುಗಳ ಉಲ್ಲಂಘನೆಗಾಗಿ ಬಿಲ್‌ನಲ್ಲಿ ದಂಡ ಹಾಗೂ ಕಡಿತವನ್ನು ಮಾಡಿದ ಸುಮಾರು 3 ಕೋ.ರೂ. ಕುರಿತು ಕಂಪೆನಿಯ ಆಡಳಿತ ನಿರ್ದೇಶಕರನ್ನು 15 ದಿನಗಳೊಳಗೆ ಮಾತು ಕತೆಗೆ ಮುಂದಾಗುವಂತೆ ಸೂಚಿ ಸಲಾಗಿದೆ. ಸಮಸ್ಯೆ ಇತ್ಯರ್ಥ ವಾಗದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಮನಪಾ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ತಿಳಿಸಿದ್ದಾರೆ. ಮನಪಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಂಗಳವಾರ ರಾತ್ರಿ ಶಾಸಕ ಜೆ.ಆರ್.ಲೋಬೊ ಕಂಪೆನಿ ಮುಖ್ಯಸ್ಥರ ಜತೆ ನಡೆಸಿದ ಮಾತುಕತೆಯ ಬಳಿಕ ಬಾಕಿ 2 ಕೋ.ರೂ. ಪಾವತಿಸಲು ಒಪ್ಪಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಯಿಂದ ಇಂದು ಎಂದಿನಂತೆ ಕಸ ಸಂಗ್ರಹ ಕಾರ್ಯ ನಡೆದಿದೆ ಎಂದರು. ಕಂಪೆನಿಯವರು 10 ಕೋ.ರೂ. ಬಾಕಿ ಇರುವುದಾಗಿ ಹೇಳಿಕೊಂಡಿರುವುದು ತಪ್ಪು   ಮಾಹಿತಿ. ಆದರೆ, ಕಳೆದ ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ ಮನಪಾ ಪಾವತಿಸಬೇಕಾಗಿದ್ದ ಒಟ್ಟು 20,41,46,804.93 ರೂ.ಗಳಲ್ಲಿ ಜನವರಿ 5ರಂದು ನಿರ್ಧಾರವಾದಂತೆ 2 ಕೋ.ರೂ. ಸೇರಿ ಒಟ್ಟು 17,68,99,979.29ರೂ.ನ್ನು ಪಾವತಿಸಲಾಗಿದೆ. ಗುತ್ತಿಗೆಯ ಕರಾರಿನನ್ವಯ ಕಂಪೆನಿಯು ನಿಗದಿತ ಕಾರ್ಮಿಕರನ್ನು ನಿಯೋಜಿಸದಿರುವುದು, ರಸ್ತೆ ಗುಡಿಸುವ ಯಂತ್ರವನ್ನು ಅಳವಡಿಸದಿರುವುದು, ಎಲ್ಲ ಕಾರ್ಮಿಕರಿಗೆ ಸುರಕ್ಷಾ ಸಾಧನ ಸಲಕರಣೆ ಗಳನ್ನು ಒದಗಿಸದಿರುವುದು, ನಿಗದಿಪಡಿಸಿದ ವಲಯಗಳಲ್ಲಿ ವಾಹನಗಳನ್ನು ಬಳಕೆ ಮಾಡದಿರುವುದು, ತೂಕವನ್ನು ಹೆಚ್ಚಿಸಲು ಮಣ್ಣು ಹಾಗೂ ಕಟ್ಟಡದ ಭಗ್ನಾವಶೇಷ ಹಾಗೂ ಇತರ ನಿರ್ಬಂಧಿತ ವಸ್ತುಗಳನ್ನು ಸಾಗಿಸಿರುವುದು, ತ್ಯಾಜ್ಯವನ್ನು ಸರಿಯಾಗಿ ಸಾಗಾಟ ಮಾಡದಿರುವುದು ಮೊದಲಾದ ಒಪ್ಪಂದದ ಶರತ್ತುಗಳ ಉಲ್ಲಂಘನೆಗಾಗಿ 3,08,27,223 ರೂ.ನ್ನು ಕಡಿತ ಮಾಡಲಾ ಗಿದೆ. ಈ ಬಗ್ಗೆ ಕಂಪೆನಿಗೆ 25ಕ್ಕೂ ಅಧಿಕ ನೋಟಿಸ್‌ಗಳನ್ನು ನೀಡಲಾಗಿದ್ದರೂ ಮಾತುಕತೆಗೆ ಮುಂದಾಗಿಲ್ಲ ಎಂದವರು ವಿವರಿಸಿದರು. 
ಆ್ಯಂಟನಿ ಕಂಪೆನಿ ಗುತ್ತಿಗೆ ಆರಂಭಿಸಿದ ಮೊದಲ 3 ತಿಂಗಳ ತನಕ ಪ್ರೊಬೆಷನರಿ ಅವಧಿಯಾಗಿ ನೀಡಲಾಗಿತ್ತು. ಆ ಅವಧಿಗೆ ಮೊಬಿಲೈಸೇಶನ್ ಚಾರ್ಟ್ ಹಾಗೂ ಮ್ಯಾನೇ ಜ್‌ಮೆಂಟ್ ಪ್ಲಾನ್ ನೀಡಬೇಕಿದ್ದು, ಕಂಪೆನಿ 5 ತಿಂಗಳು ತಡವಾಗಿ ಈ ಚಾರ್ಟ್ ಹಾಗೂ ಪ್ಲಾನನ್ನು ಮನಪಾಕ್ಕೆ ನೀಡಿತ್ತು. ಇದರಿಂದಾಗಿ ಕಂಪೆನಿಗೆ ಕೆಲ ತಿಂಗಳ ಪಾವತಿ ಆರಂಭದಲ್ಲಿ ಬಾಕಿಯಾಗಿತ್ತು. ಬಳಿಕ ಹಂತಹಂತವಾಗಿ ಅವುಗಳನ್ನು ಪಾವತಿಸಲಾಗಿದ್ದು, 2.4 ಕೋ.ರೂ. ಮಾತ್ರ ಬಾಕಿ ಇದೆ ಎಂದು ಮನಪಾ ಆಯುಕ್ತ ಡಾ.ಗೋಪಾಲಕೃಷ್ಣ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ದೀಪಕ್ ಪೂಜಾರಿ, ಪ್ರಕಾಶ್ ಸಾಲ್ಯಾನ್, ಹರಿನಾಥ್, ಕೇಶವ್ ಉಪಸ್ಥಿತರಿದ್ದರು.

ನೋಟಿಸ್ ನೀಡದೆ ಕಂಪೆನಿಯಿಂದ ಕಾರ್ಯ ಸ್ಥಗಿತ
ಕರಾರಿನ ಪ್ರಕಾರ ಪಾವತಿಗೆ ಬಾಕಿಯ ಹಿನ್ನೆಲೆಯಲ್ಲಿ ಆ್ಯಂಟನಿ ವೇಸ್ಟ್ ಕಂಪೆನಿಯು ಕಸ ಸಂಗ್ರಹ ವನ್ನು ಸ್ಥಗಿತಗೊಳಿಸುವಂತಿಲ್ಲ. ಹಾಗಿದ್ದರೂ ಕಂಪೆನಿ ಏಕಾಏಕಿಯಾಗಿ ನೋಟಿಸ್ ನೀಡದೆ ಕೆಲಸ ಸ್ಥಗಿತಗೊಳಿಸುವ ಕಾರ್ಯವನ್ನು ಮೂರನೆ ಬಾರಿ ಮಾಡಿದೆ. ಈ ಬಗ್ಗೆ ಎರಡು ಬಾರಿ ಶೋಕಾಸ್ ನೋಟಿಸ್ ನೀಡಿ ಕಂಪೆನಿಗೆ ನೀಡಿರುವ ಗುತ್ತಿಗೆಯನ್ನು ಯಾಕೆ ಹಿಂಪಡೆ ಯಬಾರದು ಎಂದು ಪ್ರಶ್ನಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಮನಪಾ ಆಯುಕ್ತ ಗೋಪಾಲಕೃಷ್ಣ ಪ್ರತಿಕ್ರಿಯಿಸಿದರು. ಕಂಪೆನಿಯು ಮನಪಾ ಜತೆ ಮಾಡಿಕೊಂಡಿರುವ ಕರಾರಿನಂತೆ ನಡೆದುಕೊಳ್ಳದಿದ್ದರೂ ಬಾಕಿ ಪಾವತಿ ಹಿನ್ನೆಲೆಯಲ್ಲಿ ಮನಪಾವನ್ನೇ ಬ್ಲಾಕ್‌ಮೇಲ್ ಮಾಡುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮುಂದೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಕಂಪೆನಿಯ ಬ್ಲಾಕ್‌ಮೇಲ್‌ಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆಯನ್ನೂ ನೀಡಲಾಗುವುದು ಎಂದರು.
ಸಕಾಲದಲ್ಲಿ ತೆರಿಗೆ ಪಾವತಿಸಲು ಸಾರ್ವಜನಿಕರಿಗೆ ಕರೆ
 ಮನಪಾದಲ್ಲಿ ಅನುದಾನ ಲಭ್ಯತೆಯ ಕೊರತೆಯಿಂದಾಗಿ ಆ್ಯಂಟನಿ ಕಂಪೆನಿಗೆ ಹಣ ಪಾವತಿ ಬಾಕಿಯಾಗಿದೆ. ಪ್ರಸ್ತುತ ಮನಪಾ ಸಾಮಾನ್ಯ ನಿಧಿಯಿಂದ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಬಿಲ್‌ನ ಮೊತ್ತವನ್ನು ಪಾವತಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ವಿಲೇವಾರಿ ಉಪ ಕರವನ್ನು ವಿಧಿಸಲಾಗುತ್ತಿದೆ. ಇದೀಗ ಸಂಗ್ರಹ ವಾಗಬೇಕಾಗಿದ್ದ 55.65 ಕೋ.ರೂ. ಆಸ್ತಿ ತೆರಿಗೆಯ ಜೊತೆ 15 ಕೋ.ರೂ. ಘನತಾಜ್ಯ ಉಪಕರ ಸಂಗ್ರಹವಾಗಬೇಕಿದೆ. ಆದರೆ ಈವರೆಗೆ 30 ಕೋ.ರೂ. ಆಸ್ತಿ ತೆರಿಗೆ ಹಾಗೂ 4.51 ಕೋ.ರೂ. ಘನತ್ಯಾಜ್ಯ ಉಪಕರ ಮಾತ್ರ ಸಂಗ್ರಹವಾಗಿದೆ. ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸಿದರೆ ಘನತ್ಯಾಜ್ಯ ನಿರ್ವಹಣೆಯ ಕಂಪೆನಿಗೂ ಬಾಕಿಯನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗಲಿದೆ ಎಂದು ಆಯುಕ್ತ ಗೋಪಾಲಕೃಷ್ಣ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News