ಉತ್ತರ ಕನ್ನಡ ಜಿಲ್ಲಾ ತಂಡ ಸಮಗ್ರ ಪ್ರಶಸ್ತಿ
ಗೃಹರಕ್ಷಕ ದಳ ವಲಯ ಮಟ್ಟದ ಕ್ರೀಡಾಕೂಟ
ಉಡುಪಿ, ಜ.6: ಉಡುಪಿ ಜಿಲ್ಲಾ ಗೃಹ ರಕ್ಷಕದಳದ ವತಿಯಿಂದ ಮಣಿಪಾಲ ಎಂಐಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಉಡುಪಿ, ಚಿಕ್ಕಮಗಳೂರು, ದ.ಕ. ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡ ಸಮಗ್ರ ಪ್ರಶಸ್ತಿ ಗೆದ್ದು ಕೊಂಡಿತು.
ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಗರಾಜ್ ಗೌಡ ಹಾಗೂ ಮಹಿಳೆಯರ ವಿಭಾಗದಲ್ಲಿ ಸಂಗೀತಾ ಗೌಡ ಪಡೆದುಕೊಂಡರು. ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಬಹುಮಾನಗಳನ್ನು ವಿತರಿಸಿದರು. ಗೃಹರಕ್ಷಕ ದಳದ ಚಿಕ್ಕಮಗಳೂರು ಜಿಲ್ಲಾ ಕಮಾಂಡೆಂಟ್ ಟಿ.ಕೆ. ಫಣಿರಾಜ್, ಉತ್ತರ ಕನ್ನಡ ಜಿಲ್ಲಾ ಕಮಾಂಡೆಂಟ್ ಗಣೇಶ್, ಶಿವಮೊಗ್ಗ ಜಿಲ್ಲಾ ಕಮಾಂಡೆಂಟ್ ಶಿವಕುಮಾರ್, ದ.ಕ. ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರ್, ಸೆಕೆಂಡ್ ಇನ್ ಕಮಾಂಡ್ ಮುಹಮ್ಮದ್ ಇಸ್ಮಾಯೀಲ್, ಉಡುಪಿ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಉಪಸ್ಥಿತರಿದ್ದರು.
ಉಡುಪಿ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡೆಪ್ಯುಟಿ ಕಮಾಂಡೆಂಟ್ ರಮೇಶ್ ವಂದಿಸಿದರು. ಸಾಯಿ ನಾಥ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.