ನಾವೂರು ಬಾಲಯೇಸು ಮಹೋತ್ಸವಕ್ಕೆ ಚಾಲನೆ
ಬೆಳ್ತಂಗಡಿ, ಜ.6: ನಾವೂರು ಬಾಲಯೇಸು ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಜ.14ರವರೆಗೆ ನಡೆಯಲಿದೆ ಎಂದು ಚರ್ಚಿನ ಧರ್ಮಗುರು ಫಾ.ಶಾಜಿ ಮಾಥ್ಯೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ.12ರಂದು 3:30ಕ್ಕೆ ಸಂತೆಕಟ್ಟೆಯಿಂದ ನಾವೂರು ಬಾಲಯೇಸು ದೇವಾಲಯಕ್ಕೆ ಬಾಲಯೇಸುವಿನ ಸ್ವರೂಪವನ್ನು ವಾಹನ ಜಾಥಾದಲ್ಲಿ ತರಲಾಗುವುದು. ಬಳಿಕ ವಾಹನಗಳ ಆಶೀರ್ವಚನ ನಡೆಯಲಿದೆ. ಬೆಳ್ತಂಗಡಿ ಧರ್ಮಪ್ರಾಂತದ ವಿಕಾರ್ ಜನರಲ್ ಫಾ. ಜೋಸೆಫ್ ನೇತೃತ್ವದಲ್ಲಿ ಆರಂಭಗೊಳ್ಳಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿವಿಧ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 5:15ಕ್ಕೆ ಪವಿತ್ರ ಪರಮ ಪ್ರಸಾದ ಆರಾಧನೆ ನಡೆಯಲಿದೆ ಹಾಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ. ಜ.14ರಂದು ಬೆಳಗ್ಗೆ 10ಕ್ಕೆ ಬಲಿಪೂಜೆಯೊಂದಿಗೆ ಮಹೋತ್ಸವ ಸಮಾಪನಗೊಳ್ಳಲಿದೆ. ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಂಸಿಎ ಅಧ್ಯಕ್ಷೆ ಕ್ಸೇವಿಯರ್ ಪಾಲೇಲಿ, ನಾವೂರು ಗ್ರಾಮ ಸಮಿತಿಯ ಅಧ್ಯಕ್ಷ ಆ್ಯಂಟನಿ ವಿ.ಪಿ., ಟ್ರಸ್ಟಿಗಳಾದ ಪೌಲೋಸ್ ಟಿ.ವಿ., ಸೆಬಾಸ್ಟಿನ್ ವಿ.ಪಿ., ಪಾಪಚ್ಚನ್ ಉಪಸ್ಥಿತರಿದ್ದರು.