ಕೋಮು ಸೌಹಾರ್ದಕ್ಕೆ ಶ್ರಮಿಸೋಣ: ಸಿ.ಎಂ.ಇಬ್ರಾಹೀಂ

Update: 2016-01-06 19:02 GMT

ಮಂಗಳೂರು, ಜ. 6: ಕರಾವಳಿಯಲ್ಲಿ ಕೋಮು ಸಾಮರಸ್ಯ ವನ್ನು ಬಲಪಡಿಸಲು ಎಲ್ಲರೂ ಒಗ್ಗೂಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ಹೇಳಿದ್ದಾರೆ.

ಬಂದರ್‌ನ ಜೆ.ಎಂ. ರಸ್ತೆಯಲ್ಲಿರುವ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಕರಾವಳಿಯಲ್ಲಿ ಕೋಮು ಸಾಮರಸ್ಯ ಹದಗೆಡು ತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಕರಾವಳಿ ಪ್ರದೇಶಗಳ ಅಭಿವೃದ್ಧಿಯಾಗಬೇಕಾದರೆ ಶಾಂತಿ ನೆಲೆಸುವುದು ಅತ್ಯಗತ್ಯ. ಕೋಮು ಸಾಮರಸ್ಯದಿಂದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಬಹುದು ಎಂದರು.

ಕ್ರೆಸೆಂಟ್ ಶಾಲೆಗೆ ಸ್ಥಳ ಮಂಜೂರಾತಿ ಭರವಸೆ: ಬಂದರ್ ಪ್ರದೇಶದಲ್ಲಿ ಸುಮಾರು 5 ಎಕರೆ ಭೂಮಿ ಖಾಲಿ ಇದ್ದು, ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯಿಂದ ಪ್ರಸ್ತಾವನೆ ಸಲ್ಲಿಸಿದರೆ ಸರಕಾರದಿಂದ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ಸಿ.ಎಂ.ಇಬ್ರಾಹೀಂ ಭರವಸೆ ನೀಡಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರೆಸೆಂಟ್ ವೆಲ್ಫೇರ್ ಸೆಂಟರ್‌ನ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, ಸುಮಾರು 58 ವರ್ಷಗಳ ಹಿಂದೆ ಬಂದರ್ ಪ್ರದೇಶವು ತೀರಾ ಬಡತನ ಹಾಗೂ ಕೊಳಗೇರಿಯಿಂದ ಕೂಡಿತ್ತು. ಅಂದು ವಿದೇಶಿ ಮಹಿಳೆಯೊಬ್ಬರು ಸಮಾಜದ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಮಹಿಳೆಯರ ಏಳಿಗೆಯನ್ನು ಮನಗಂಡು ಹಾಗೂ ಮಹಿಳೆಯರ ಹಿತದೃಷ್ಟಿಯಿಂದ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಅದು ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವಾಗಿ ಕಾರ್ಯಾಚರಿಸುತ್ತಿತ್ತು. ಕ್ರಮೇಣ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವವನ್ನು ನೀಡಿ ಪ್ರಾರಂಭಿಸಲಾದ ಶಿಕ್ಷಣ ಸಂಸ್ಥೆಯು ಕ್ರೆಸೆಂಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೆಸರಿನಲ್ಲಿ ಖ್ಯಾತಿಯನ್ನು ಪಡೆದುಕೊಂಡಿತು ಎಂದು ಅವರು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ರಮೀಝಾ ನಾಸಿರ್, ಶಾಲಾ ಪ್ರಾಂಶುಪಾಲೆ ಶೈಲಜಾ ಎಂ., ಕಾರ್ಯಾಧ್ಯಕ್ಷ ಝಮೀರ್ ಅಂಬರ್, ಪ್ರಧಾನ ಕಾರ್ಯದರ್ಶಿ ಎಂ.ಶರೀಫ್, ಕ್ರೆಸೆಂಟ್ ವೆಲ್ಫೇರ್ ಸಮಿತಿಯ ಕೋಶಾಧಿಕಾರಿ ಬಶೀರ್ ಅಹ್ಮದ್, ಸದಸ್ಯರಾದ ಹಾರಿಸ್, ಹನೀಫ್, ಮನ್ಸೂರ್ ಅಹ್ಮದ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸದಸ್ಯ ಡಿ.ಎಂ.ಅಸ್ಲಂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News