ಸಮ-ಬೆಸ ನಿಯಮ ಪ್ರಯೋಗಕ್ಕೆ ಒಂದು ವಾರ ಸಾಕು: ದಿಲ್ಲಿ ಹೈಕೋರ್ಟ್

Update: 2016-01-06 18:00 GMT

ಹೊಸದಿಲ್ಲಿ, ಜ.6: ದಿಲ್ಲಿಯಲ್ಲಿ ವಿಷ ವಾಯುವನ್ನು ನಿವಾರಿಸಲು ಪ್ರಾಯೋಗಿಕವಾಗಿ ಸಮ-ಬೆಸ ನಿಯಮ ಜಾರಿಗೆ ತಂದಿರುವುದು ಹೈಕೋರ್ಟ್‌ಗೆ ಸಂತಸ ನೀಡಿಲ್ಲ. ಈ ಪ್ರಯೋಗ ಒಂದು ವಾರಕ್ಕಿಂತ ಹೆಚ್ಚು ಕಾಲ ಯಾಕೆ ನಡೆಯಬೇಕೆಂಬುದರ ಕುರಿತು ವಿವರಣೆ ನೀಡುವಂತೆ ನ್ಯಾಯಮೂರ್ತಿಗಳು ಅರವಿಂದ ಕೇಜ್ರಿವಾಲ್ ಸರಕಾರಕ್ಕೆ ಆದೇಶ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ‘ಅಪರ್ಯಾಪ್ತ’ ಎಂದು ಟೀಕಿಸಿರುವ ನ್ಯಾಯಮೂರ್ತಿಗಳು, ಇದರಿಂದ ಜನರಿಗೆ ತೊಂದರೆಯಾಗಿದೆ ಎಂದಿದ್ದಾರೆ.
ವಿಶ್ವದ ಅತ್ಯಂತ ಹೆಚ್ಚು ಮಲಿನ ರಾಜಧಾನಿಯಲ್ಲಿ ವಿಷ ಗಾಳಿ ನಿಯಂತ್ರಣಕ್ಕಾಗಿ ಜ.1ರಿಂದ 2 ವಾರಗಳ ಕಾಲಕ್ಕೆ ಪರಿಚಯಿಸಲಾಗಿರುವ ಹೊಸ ಸಂಚಾರ ನಿಯಮದಿಂದ ವಾಯು ಮಾಲಿನ್ಯದ ಮೇಲೆ ಯಾವ ಪರಿಣಾಮವಾಗಿದೆಯೆಂಬ ಕುರಿತು ಶುಕ್ರವಾರದೊಳಗೆ ವಿವರ ದಾಖಲಿಸುವಂತೆ ನ್ಯಾಯಾಲಯವು ದಿಲ್ಲಿ ಸರಕಾರಕ್ಕೆ ಸೂಚಿಸಿದೆ.
ನಗರದ ಗಾಳಿಯ ಗುಣಮಟ್ಟ ಸುಧಾರಣೆಯನ್ನು ಸರಿಯಾಗಿ ಅಂದಾಜಿಸಲು ಸಮ-ಬೆಸ ನಿಯಮ 2 ವಾರಗಳ ಕಾಲ ಜಾರಿಯಲ್ಲಿರುವುದು ಅಗತ್ಯ. ಸರಕಾರವು ಇದನ್ನು ಹಾಗೂ ಇತರ ಉತ್ತರಗಳನ್ನು ನ್ಯಾಯಾಲಯಕ್ಕೆ ಶುಕ್ರವಾರ ಮಂಡಿಸಲಿದೆಯೆಂದು ದಿಲ್ಲಿಯ ಸಾರಿಗೆ ಸಚಿವ ಗೋಪಾಲ ರಾಯ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಎಲ್ಲ ಅತಿಸೂಕ್ಷ್ಮ ಕಣಗಳಲ್ಲೇ ಅತ್ಯಂತ ಸೂಕ್ಷ್ಮ ಹಾಗೂ ಮಾರಣಾಂತಿಕವಾಗಿರುವ ಪರ್ಟಿಕ್ಯುಲೇಟ್ ಮ್ಯಾಟರ್‌ನ(ಪಿಎಂ2.5) ಮಟ್ಟದಲ್ಲಿ ‘ಖಚಿತವಾದ ಇಳಿಕೆಯ ಪ್ರವೃತ್ತಿ’ ಕಂಡು ಬಂದಿದೆಯೆಂದು ದಿಲ್ಲಿ ಸರಕಾರ ನಿನ್ನೆ ಪ್ರತಿವಾದಿಸಿತ್ತು. ಸರಕಾರವು ಯೋಜನೆಯ ಬಗ್ಗೆ ಇದುವರೆಗೆ ಸಲ್ಲಿಸಿರುವ ವರದಿಯು ‘ವ್ಯರ್ಥ’ ಎಂದು ನ್ಯಾಯಾಲಯವಿಂದು ಹೇಳಿದೆ. ಈ ಸಂಚಾರ ನಿಯಮದಿಂದ ವಕೀಲರು ಹಾಗೂ ಹಿರಿಯ ನಾಗರಿಕರಿಗೆ ವಿನಾಯ್ತಿ ನೀಡಬೇಕೆಂಬುದೂ ಸೇರಿದಂತೆ ಈ ಸಂಬಂಧದ ಹಲವು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News