ಟೇಪ್ ವಿವಾದ: ಕಾಂಗ್ರೆಸ್‌ನಿಂದ ಅಮಿತ್ ಜೋಗಿ ಉಚ್ಚಾಟನೆ
ರಾಯಪುರ,ಜ.6: ಉಪ ಚುನಾವಣೆಯಲ್ಲಿ ‘ಫಿಕ್ಸಿಂಗ್’ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಯು ಗೆಲ್ಲುವಂತೆ ಮಾಡಿದ್ದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿಯವರ ಪುತ್ರ ಅಮಿತ್ ಜೋಗಿಯವರನ್ನು ಛತ್ತೀಸ್‌ಗಡ ಕಾಂಗ್ರೆಸ್ ಬುಧವಾರ ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟನೆಗೊಳಿಸಿದೆ. ಅಜಿತ್ ಜೋಗಿಯವರನ್ನೂ ಪಕ್ಷದಿಂದ ಉಚ್ಚಾಟಿಸಬೇಕೆಂದು ರಾಜ್ಯ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ.
‘‘ಇದು ನನಗೆ ನೋವನ್ನುಂಟು ಮಾಡಿದೆ.ನನ್ನ ವಿರುದ್ಧದ ಆರೋಪಗಳು ರುಜುವಾತಾಗದೆ ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವು ತಾರತಮ್ಯದಿಂದ ಕೂಡಿದ್ದು, ನ್ಯಾಯಸಮ್ಮತವಲ್ಲ’’ ಎಂದು ಅಮಿತ್ ಜೋಗಿ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಯು ಕೊನೆಯ ಕ್ಷಣದಲ್ಲಿ ತನ್ನ ನಾಮಪತ್ರವನ್ನು ಹಿಂದೆಗೆದುಕೊಳ್ಳುವಂತೆ ಅಜಿತ್ ಜೋಗಿ ಮತ್ತು ಅಮಿತ್ ಜೋಗಿ ಒತ್ತಡ ಹೇರಿದ್ದರೆನ್ನುವುದನ್ನು ಸೂಚಿಸುವ ಮುದ್ರಿತ ಆಡಿಯೋ ಟೇಪ್ ಬಹಿರಂಗಗೊಂಡಾಗಿನಿಂದ ತಂದೆ-ಮಗನ ವಿರುದ್ಧ ಶಿಸ್ತುಕ್ರಮವನ್ನು ನಿರೀಕ್ಷಿಸಲಾಗಿತ್ತು. ಅಮಿತ್ ಉಚ್ಚಾಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರ ನೂರಕ್ಕೂ ಅಧಿಕ ಬೆಂಬಲಿಗರು ಪಕ್ಷವನ್ನು ತೊರೆದಿದ್ದಾರೆ.
ಬುಧವಾರ ಮಧ್ಯಾಹ್ನ ಇಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಮಿತ್‌ರನ್ನು ಉಚ್ಚಾಟಿಸುವ ಮತ್ತು ಅಜಿತ್ ಉಚ್ಚಾಟನೆಗೆ ಶಿಫಾರಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾೆಲ್ ಅವರು, ಅಜಿತ್ ಜೋಗಿ ಮತ್ತು ಅವರ ಪುತ್ರನ ಕೃತ್ಯಗಳು ಪಕ್ಷದ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿರುವುದರಿಂದ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.