ಪಠಾಣ್‌ಕೋಟ್ ದಾಳಿ: ಎಸ್ಪಿಮೇಲೆ ಹದ್ದಿನಕಣ್ಣು
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಗುರುದಾಸ್‌ಪುರ ಎಸ್ಪಿಸಲ್ವೀಂದರ್ ಸಿಂಗ್ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದೆ.
ಭಯೋತ್ಪಾದಕರು ದಾಳಿಗೆ ಮುನ್ನ ಹೇಗೆ ಅವರ ಕಾರಿನಲ್ಲೇ ಅವರನ್ನು ಹೇಗೆ ಅಪಹರಿಸಿದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಎಸ್ಪಿ ಹೇಳಿಕೆಗೂ ಅವರ ಜ್ಯುವೆಲ್ಲರ್ ಸ್ನೇಹಿತ ರಾಜೇಶ್ ವರ್ಮಾ ಮತ್ತು ಅಡುಗೆಯ ಮದನ್ ಗೋಪಾಲ್ ಹೇಳಿದ ಹೇಳಿಕೆಗೂ ವೈರುದ್ಧ್ಯಗಳು ಇರುವ ಹಿನ್ನೆಲೆಯಲ್ಲಿ ಎನ್‌ಐಎ ವಿಚಾರಣೆ ನಡೆಸುತ್ತಿದೆ.
ಅಪಹರಣಕಾರರು ಸೇನೆಯ ಸಮವಸ್ತ್ರದಲ್ಲಿದ್ದರು. ಐದು ಮಂದಿ ಕೂಡಾ ಎಕೆ-47 ರೈಫಲ್ ಹೊಂದಿದ್ದರು ಎಂದು ಎಫ್‌ಐಆರ್‌ನಲ್ಲಿ ಸಿಂಗ್ ಹೇಳಿದ್ದರು. ಆದರೆ ಮಾಧ್ಯಮಗಳಿಗೆ ಸಿಂಗ್ ಹೇಳಿದಂತೆ, ಭಯೋತ್ಪಾದಕರು ಜಿಪಿಎಸ್ ಹೊಂದಿದ್ದರು ಎಂಬ ಮಾಹಿತಿಯನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ.
ಪಠಾಣ್‌ಕೋಟ ದರ್ಗಾದ ಮೇಲೆ ತಮಗೆ ಅಪಾರ ನಂಬಿಕೆ ಇದ್ದು, ಅಲ್ಲಿಗೆ ಭೇಟಿ ನೀಡುತ್ತಿದ್ದುದಾಗಿ ಎಸ್ಪಿ ಹೇಳಿಕೊಂಡಿದ್ದಾರೆ. ಇದನ್ನು ಪಂಜ್ ಪೀರ್ ದರ್ಗಾದ ಉಸ್ತುವಾರಿ ವಹಿಸಿರುವ ಸೋಮರಾಜ್ ಕೂಡಾ ಖಚಿತಪಡಿಸಿದ್ದಾರೆ. ಹೊಸ ವರ್ಷದಂದು ವರ್ಮಾ ಹಾಗೂ ಸಿಂಗ್ ಎರಡು ಬಾರಿ ಭೇಟಿ ನೀಡಿದ್ದಾರೆ ಎಂದೂ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಆ ದರ್ಗಾದ ಅನುಯಾಯಿಯಾಗಿದ್ದರೆ, ಉಗ್ರರು ಭಾರತ ಪ್ರವೇಶಿಸಿದ ದಿನವೇ ಮೊದಲ ಬಾರಿ ಅಲ್ಲಿಗೆ ಏಕೆ ಭೇಟಿ ನೀಡಿದ್ದೀರಿ ಎಂದೂ ಎನ್‌ಐಎ ಪ್ರಶ್ನಿಸಿದೆ. ಸಿಂಗ್ ಅವರ ನಿವಾಸ ಈ ದರ್ಗಾದಿಂದ ಕೇವಲ 34 ಕಿಲೋಮೀಟರ್ ಅಂತರದಲ್ಲಿದೆ.