ಪಠಾಣ್‌ಕೋಟ್ ಭಯೋತ್ಪಾದಕ ದಾಳಿ: ಮೊದಲು ಕ್ರಮ ಕೈಗೊಳ್ಳಿ ಆಮೇಲೆ ಮಾತುಕತೆ
ಪಾಕ್‌ಗೆ ಭಾರತದ ತಾಕೀತು
ಹೊಸದಿಲ್ಲಿ,ಜ.7: ಭಾರತವು ಒದಗಿಸಿರುವ ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ಭಯೋತ್ಪಾದಕ ದಾಳಿಗಳ ಸಾಕ್ಷಾಧಾರಗಳ ಕುರಿತಂತೆ ಪಾಕಿಸ್ತಾನವು ‘ಪ್ರಾಮಾಣಿಕ ಮತ್ತು ನಿರ್ಣಾಯಕ ಕ್ರಮ’ವನ್ನು ತೆಗೆದುಕೊಳ್ಳಲೇಬೇಕು ಎಂದು ಗುರುವಾರ ಇಲ್ಲಿ ಹೇಳಿದ ಸರಕಾರವು,ಇಲ್ಲದಿದ್ದರೆ ಮುಂದಿನ ವಾರ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿರುವ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಹತ್ವದ ಮಾತುಕತೆಗಳು ನಡೆಯುವ ಸಾಧ್ಯತೆಯಿಲ್ಲ ಎಂಬ ಸುಳಿವು ನೀಡಿದೆ.
ಚೆಂಡು ಈಗ ಪಾಕಿಸ್ತಾನದ ಅಂಗಳದಲ್ಲಿದೆ. ಅದು ಹೇಗೆ ಸ್ಪಂದಿಸುತ್ತದೆ ಎನ್ನುವುದು ತಕ್ಷಣಕ್ಕೆ ಗಮನಿಸಬೇಕಾದ ವಿಷಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಹೇಳಿದರು. ಅತ್ತ ಪಾಕಿಸ್ತಾನದಲ್ಲಿ ಪ್ರಧಾನಿ ನವಾಝ್ ಶರೀಫ್ ಅವರು ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ಭಾರತವು ಒದಗಿಸಿರುವ ಸಾಕ್ಷಾಧಾರಗಳ ಪರಿಶೀಲನೆ ನಡೆಯಿತೆನ್ನಲಾಗಿದೆ. ಇವುಗಳಲ್ಲಿ ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ದಾಳಿ ನಡೆಸಿದ್ದ ಆರು ಭಯೋತ್ಪಾದಕರ ದೂರವಾಣಿ ಕರೆಗಳ ವಿವರಗಳೂ ಸೇರಿವೆ.
ಎರಡು ದಿನಗಳ ಹಿಂದೆ ಶರೀಫ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ದಾಳಿಯ ರೂವಾರಿಗಳ ವಿರುದ್ಧ ತುರ್ತು ಕ್ರಮವನ್ನು ಭಾರತವು ಬಯಸುತ್ತಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಭಯೋತ್ಪಾದಕರ ಪಾಕ್ ನಂಟಿನ ಸಾಕ್ಷಾಧಾರಗಳನ್ನು ತಿಳಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಧೋವಲ್ ಅವರೂ ಪಾಕಿಸ್ತಾನದ ತನ್ನ ಸಹವರ್ತಿ ನಾಸೀರ್ ಜಂಝುವಾ ಅವರೊಂದಿಗೆ ಇತ್ತೀಚಿನ ದಿನಗಳಲ್ಲಿ ಕನಿಷ್ಠ ಎರಡು ಬಾರಿ ಮಾತನಾಡಿದ್ದಾರೆ.
ಹತ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿರುವ ಮದ್ದುಗುಂಡುಗಳು ಮತ್ತು ಇತರ ಸಾಧನಗಳು ಪಾಕಿಸ್ತಾನದಲ್ಲಿ ತಯಾರಾಗಿವೆ ಎಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಹೇಳಿದ್ದಾರೆ.
ದಾಳಿ ರೂವಾರಿಗಳ ಗುರುತು ಪತ್ತೆ?
ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ ವೌಲಾನಾ ಮಸೂದ್ ಅಜರ್ ಮತ್ತು ಕಂದಹಾರ್ ವಿಮಾನ ಅಪಹರಣದ ಪ್ರಮುಖ ರೂವಾರಿಯಾಗಿದ್ದ ಆತನ ಸೋದರ ಅಬ್ದುಲ್ ರವೂಫ್ ಅಸ್ಘರ್ ಅವರು ಭಾರತೀಯ ಗುಪ್ತಚರ ಸಂಸ್ಥೆಗಳು ಪಠಾಣ್‌ಕೋಟ್ ದಾಳಿಯ ರೂವಾರಿಗಳೆಂದು ಗುರುತಿಸಿರುವ ನಾಲ್ವರು ವ್ಯಕ್ತಿಗಳಲ್ಲಿ ಸೇರಿದ್ದಾರೆ.
ಅಲ್ಲದೆ ದಾಳಿಯ ಸಂಚನ್ನು ಲಾಹೋರದ ಸಮೀಪದ ಸ್ಥಳದಲ್ಲಿ ರೂಪಿಸಲಾಗಿತ್ತು ಎಂದೂ ಗುಪ್ತಚರ ಸಂಸ್ಥೆಗಳು ಹೇಳಿರುವುದಾಗಿ ಉನ್ನತ ಸರಕಾರಿ ಮೂಲಗಳು ಗುರುವಾರ ಇಲ್ಲಿ ತಿಳಿಸಿದವು.