ಮೀನುಗಾರಿಕಾ ಫೆಡರೇಶನ್‌ನಲ್ಲಿ ಗೋಲ್‌ಮಾಲ್: ಯಶ್ಪಾಲ್ ಸುವರ್ಣ ಅಮಾನತು

Update: 2016-01-07 18:47 GMT

ಮಂಗಳೂರು, ಜ.7: ನಿಧಿ ದುರುಪಯೋಗ ಮಾಡಿದ ಆರೋಪದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣರನ್ನು ಹುದ್ದೆಯಿಂದ ಅಮಾನತುಗೊಳಿಸಿ ಮೈಸೂರಿನ ‘ಸಹಕಾರ ಸಂಘಗಳ ನ್ಯಾಯಾಲಯ’ವು ಆದೇಶ ನೀಡಿದೆ.

ಸಹಕಾರ ಸಂಘಗಳ ಜಂಟಿ ನಿಬಂಧಕಿ (ಮೈಸೂರು ಪ್ರಾಂತ, ಮೈಸೂರು ) ಕೆ.ಎಂ.ಆಶಾ ಈ ಆದೇಶ ನೀಡಿದ್ದಾರೆ.

ನ್ಯಾಯಾಲಯದ ಈ ಆದೇಶದನ್ವಯ ಯಶ್ಪಾಲ್ ಸುವರ್ಣ ಅವರು ಮುಂದಿನ ಆರು ವರ್ಷಗಳ ಅವಧಿವರೆಗೆ ಅಧ್ಯಕ್ಷ ಹುದ್ದೆಯನ್ನು ಮರಳಿ ಪಡೆಯುವಂತಿಲ್ಲ. ಇವರೊಂದಿಗೆ ಫೆಡರೇಶನ್‌ನ ಇತರ ಎಂಟು ಮಂದಿ ನಿರ್ದೇಶಕರನ್ನೂ ಅನರ್ಹಗೊಳಿಸಿ ಆದೇಶ ನೀಡಲಾಗಿದೆ.

ಫೆಡರೇಶನ್‌ನ ಆಡಳಿತ ಮಂಡಳಿಯ ಅಮಾನತಿಗೂ ಆದೇಶಿಸಿರುವ ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕರು, ಪದನಿಮಿತ್ತ ನಿರ್ದೇಶಕರಾಗಿರುವ ಪ್ರವೀಣ್ ನಾಯಕ್ ಅವರನ್ನು ಮೂರು ತಿಂಗಳ ಅವಧಿಗೆ ನೂತನ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ಎರಡು ಅವಧಿಯಿಂದ ಯಶ್ಪಾಲ್ ಸುವರ್ಣ ಫೆಡರೇಶನ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಹಣಕಾಸು ವಿಷಯಕ್ಕೆ ಸಂಬಂಧಿಸಿ ಅನೇಕ ಅವ್ಯವಹಾರಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿ ಎರಡು ವರ್ಷಗಳ ಹಿಂದೆ ಫೆಡರೇಶನ್‌ನ ಆನಂದ ಸಾಲ್ಯಾನ್ ಎಂಬವರು ಮೈಸೂರಿನಲ್ಲಿ ಸಹಕಾರ ಸಂಘಗಳ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಫಲಾನುಭವಿಗಳ ಆಯ್ಕೆ, ಸರಕಾರಿ ಸೌಲಭ್ಯಗಳ ವಿತರಣೆಯಲ್ಲಿ ಅವ್ಯವಹಾರ, ಮೀನುಗಾರರಿಗೆ ಡೀಸೆಲ್ ವಿತರಣೆಯಲ್ಲಿ ಗೋಲ್‌ಮಾಲ್ ಮೊದಲಾದ ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಯಶ್ಪಾಲ್ ಸುವರ್ಣ ಅವರು ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಉಡುಪಿ ನಗರಸಭೆಯ ಚುನಾಯಿತ ಸದಸ್ಯರಾಗಿರುವ ಅವರು, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಮೆರವಣಿಗೆ ಸಮಿತಿಯಲ್ಲೂ ಸಕ್ರಿಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News