×
Ad

ಗ್ರಾಪಂಗೆ ನೀಡಿದ ದೋಣಿ, ತಾಲೂಕು ಕಚೇರಿ ಆವರಣದಲ್ಲಿ!

Update: 2016-01-08 00:21 IST

ಉಡುಪಿ, ಜ.7: ಸ್ವರ್ಣ ನದಿಯ ದಂಡೆಯಲ್ಲಿ ರುವ ಹಾವಂಜೆ ಗ್ರಾಮದ ಜನರ ಸುಮಾರು ನಾಲ್ಕು ದಶಕಗಳ ಬೇಡಿಕೆಯಂತೆ ಹಾವಂಜೆ ಕೀಳಿಂಜೆಯ ತ್ರಿವರ್ಣ ವಿಶ್ವವೇದಿಕೆಯ ಸತತ ಪ್ರಯತ್ನದ ಫಲವಾಗಿ ಜಿಲ್ಲಾ ಪ್ರಕೃತಿ ವಿಕೋಪ ನಿಧಿಯ ಮೂಲಕ ಹೊಸ ವರ್ಷದ ಮೊದಲ ದಿನ ಒಂದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ದೋಣಿಯನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ ಇದೀಗ ಈ ದೋಣಿ ಉಡುಪಿ ತಾಲೂಕು ಕಚೇರಿಯ ಆವರಣದ ಮರದ ಕೆಳಗೆ ಬಿಸಿಲು ಕಾಯಿಸಿಕೊಳ್ಳುತ್ತಿದೆ.

ನಿಯಮದಂತೆ ಗ್ರಾಪಂಗೆ ಹಸ್ತಾಂತರಿಸ ಲಾದ ಈ ದೋಣಿಯನ್ನು ಗ್ರಾಪಂನ ಪಿಡಿಒ ಪಡೆದುಕೊಳ್ಳಬೇಕು. ಆದರೆ ಗ್ರಾಪಂನ ಸದಸ್ಯರು ಹಾಗೂ ಇತರರ ರಾಜಕೀಯ ಮೇಲಾಟದಿಂದಾಗಿ ಈ ದೋಣಿ ಇನ್ನೂ ಅಧಿಕೃತವಾಗಿ ಗ್ರಾಪಂಗೆ ಹಸ್ತಾಂತರಗೊಳ್ಳದೆ ಉಳಿದುಕೊಂಡಿದೆ. ಹೀಗಾಗಿ ಅದನ್ನು ತಹಶೀಲ್ದಾರ್ ತಾಲೂಕು ಕಚೇರಿ ಆವರಣ ದಲ್ಲಿ ಇರಿಸಿಕೊಂಡಿದ್ದಾರೆ. ಹಾವಂಜೆ-ಕೀಳಿಂಜೆ ತಗ್ಗುಪ್ರದೇಶವಾಗಿದ್ದು, ಮಳೆಗಾಲದಲ್ಲಿ ಸದಾ ನೀರಿನಿಂದ ಆವೃತ್ತ ವಾಗಿರುತ್ತದೆ. ಇದರಿಂದ ಮಳೆಗಾಲದಲ್ಲಿ ಜನಜೀವನವೇ ಅಸ್ತವ್ಯಸ್ತವಾಗುತ್ತದೆ. ಅಲ್ಲದೇ ಕೀಳಿಂಜೆಯ ಬಳಿ ಸ್ವರ್ಣನದಿಯನ್ನು ದಾಟಿದರೆ ಮಣಿಪಾಲ ತೀರಾ ಸಮೀಪವಾ ಗುತ್ತದೆ. ಹಾಗಾಗಿ ಊರಿನ ಜನರಿಗೆ ಈ ದೋಣಿಯ ಅಗತ್ಯವಿದೆ. ಅದಕ್ಕಾಗಿ ಕಳೆದ ಒಂದು-ಒಂದೂವರೆ ದಶಕದಿಂದ ಊರಿನ ಜನರು ಹಾವಂಜೆ ಕೀಳಿಂಜೆಯಿಂದ ಮಣಿಪಾಲ ಸಮೀಪದ ಹೆರ್ಗಕ್ಕೆ ಸೇತುವೆ ನಿರ್ಮಾಣ ಹಾಗೂ ದೈನಂದಿನ ಉಪ ಯೋಗಕ್ಕೆ ದೋಣಿಯ ಬೇಡಿಕೆ ಇರಿಸಿದ್ದರು.

ಈ ನಿಟ್ಟಿನಲ್ಲಿ ತ್ರಿವರ್ಣ ವಿಶ್ವವೇದಿಕೆ ಅಧ್ಯಕ್ಷ ಸತೀಶ್‌ಪೂಜಾರಿ ಸತತ ಪ್ರಯತ್ನ ನಡೆಸಿ ಶಾಸಕ ಪ್ರಮೋದ್ ಮಧ್ವರಾಜ್, ತಹಶೀಲ್ದಾರ್, ಜಿಲ್ಲಾಧಿಕಾರಿಯ ಮೇಲೆ ಒತ್ತಡ ಹೇರಿ ಅತ್ಯುತ್ತಮ ಗುಣಮಟ್ಟದ ಫೈಬರ್‌ನ ದೋಣಿಯನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದು ಗ್ರಾಪಂನ ಕೆಲವು ಸದಸ್ಯರಿಗೆ ಸಹ್ಯವಾಗಲಿಲ್ಲ. ಜ.1ರ ರಾತ್ರಿ ಗ್ರಾಪಂಗೆ ದೋಣಿ ಹಸ್ತಾಂತರ ನಡೆಯದಂತೆ ತಡೆಯಲು ವಿಫಲ ಪ್ರಯತ್ನ ನಡೆಸಿದ ಗ್ರಾಪಂನ ಬಿಜೆಪಿ ಸದಸ್ಯರು ಪಿಡಿಒ, ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸಮಾರಂಭಕ್ಕೆ ಹೋಗದಂತೆ ತಡೆಯಲು ಯಶಸ್ವಿಯಾಗಿದ್ದರು ಎಂಬ ಆರೋಪವೂ ಇದೆ.

ಇದರಿಂದ ಸಮಾರಂಭ ನಡೆದರೂ, ದೋಣಿ ಗ್ರಾಪಂಗೆ ಹಸ್ತಾಂತರಗೊಂಡಿರಲಿಲ್ಲ. ಪಿಡಿಒ ಅಧಿಕೃತವಾಗಿ ಈ ದೋಣಿಯನ್ನು ಪಡೆದರೆ ಮಾತ್ರ ಅದು ಗ್ರಾಪಂಗೆ ಹಸ್ತಾಂತರವಾಗುತ್ತದೆ. ಪಿಡಿಒ ಬಿಜೆಪಿ ಸದಸ್ಯರು ಹೇಳಿದಂತೆ ಕೇಳುತ್ತಿದ್ದು, ತಹಶೀ ಲ್ದಾರ್ ಲಿಖಿತವಾಗಿ ತಿಳಿಸಿದ್ದರೂ ಇನ್ನೂ ಸಹ ಸಹಿ ಹಾಕಿ ದೋಣಿಯನ್ನು ಪಡೆದು ಕೊಂಡಿಲ್ಲ. ಹೀಗಾಗಿ ಅದು ತಾಲೂಕು ಕಚೇರಿ ಆವರಣದಲ್ಲಿ ಬಿದ್ದುಕೊಂಡಿದೆ ಎಂು ಸತೀಶ್ ಪೂಜಾರಿ ಪತ್ರಿಕೆಗೆ ತಿಳಿಸಿದ್ದಾರೆ.


ಪ್ರಕೃತಿ ವಿಕೋಪ ನಿಧಿಯ ಮೂಲಕ ನೀಡಲ್ಪಟ್ಟ ದೋಣಿಯನ್ನು ಗ್ರಾಪಂಗೆ ಪಡೆಯಲು ಮುಂದಾಗದೆ ಕಣ್ಣುಮುಚ್ಚಾಲೆ ಆಡುತ್ತಿರುವ ಪಿಡಿಒ ಕ್ರಮವನ್ನು ಖಂಡಿಸಿ ತ್ರಿವರ್ಣ ವಿಶ್ವ ವೇದಿಕೆಯ ಅಧ್ಯಕ್ಷ ಸತೀಶ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಜಯಶೆಟ್ಟಿ ಬನ್ನಂಜೆ, ಲೋಕನಾಥ್ ಕೋಟ್ಯಾನ್, ಸತೀಶ್ ಶೆಟ್ಟಿ ಬಾಣಬೆಟ್ಟು, ಗಣೇಶ್ ಶೆಟ್ಟಿ ಕೀಳಿಂಜೆ, ಮಾಜಿ ನಗರಸಭಾ ಸದಸ್ಯ ಸುರೇಶ್ ಶೇರಿಗಾರ್ ಬೈಲಕೆರೆ, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ಬಿ.ಕೆ.ರಾಜ್ ಕೆಮ್ಮಣ್ಣು, ಅಂಬಿಗರಾದ ತಿಮ್ಮಪ್ಪಪೂಜಾರಿ, ಸುನೀಲ್ ಪೂಜಾರಿ, ಶಕುಂತಳಾ ಪೂಜಾರಿ, ಆಶಾ ಪೂಜಾರಿ ಮುಂತಾದವರು ಇಂದು ತಹಶೀಲ್ದಾರ್ ಗುರುಪ್ರಸಾದ್‌ಗೆ ಮನವಿ ಸಲ್ಲಿಸಿದರು. ದೋಣಿಯ ಕುರಿತು ತಹಶೀಲ್ದಾರ್ ಗುರುಪ್ರಸಾದ್ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ಅದರ ಸಂಪೂರ್ಣ ಜವಾಬ್ದಾರಿ ಯನ್ನು ತಾಪಂ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಒಪ್ಪಿಸಿದ್ದು, ಅವರು ಪಿಡಿಒ ಮೂಲಕ ದೋಣಿಯನ್ನು ಗ್ರಾಪಂಗೆ ಹಸ್ತಾಂತ ರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಪಿಡಿಒ ವಿಲಾಸಿನಿ ಗ್ರಾಪಂನ ಬಿಜೆಪಿ ಸದಸ್ಯರ ತಾಳಕ್ಕೆ ಸರಿಯಾಗಿ ಕುಣಿಯುತ್ತಿದ್ದಾರೆ. ಇದರಿಂದ ತಹಶೀಲ್ದಾರ್ ಗುರುಪ್ರಸಾದ್ ಹಾಗೂ ತಾಪಂನ ಕಾರ್ಯನಿರ್ವಹಣಾಧಿಕಾರಿ ನೀಡಿದ ಸೂಚನೆಯನ್ನು ಕಡೆಗಣಿಸುತ್ತಿದ್ದಾರೆ. ದೋಣಿಯಲ್ಲಿ ಕೀಳಿಂಜೆಯಿಂದ ಹೆರ್ಗದ ಮೂಲಕ ಮಣಿಪಾಲಕ್ಕೆ ತೆರಳಲು 3.5 ಕಿ.ಮೀ. ಕ್ರಮಿಸಿದರೆ, ಸಂತೆಕಟ್ಟೆ ಮೂಲಕ ಹೋಗಲು 16 ಕಿ.ಮೀ. ದೂರ ಕ್ರಮಿಸಬೇಕು. ಹಾವಂಜೆಯಿಂದ 50ಕ್ಕೂ ಅಧಿಕ ಮಂದಿ ಪ್ರತಿದಿನ ನೌಕರಿಗಾಗಿ ಮಣಿಪಾಲಕ್ಕೆ ತೆರಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News