ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯ ಉದ್ಘಾಟನೆ
ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ದ.ಕ ಜಿಲ್ಲಾಡಳಿತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಿಂದ ನಿರ್ಮಾಣಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಕೆಳ ಅಂತಸ್ತಿನ ನವೀಕರಣ ಹಾಗೂ ಮೇಲಂತಸ್ತಿನ ನೂತನ ಕಟ್ಟಡವನ್ನು ಯುವಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ . ಅಭಯಚಂದ್ರ ಜೈನ್ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಯುವಜನ ಸಂಘಟನೆಗಳು ಸಹಕಾರಿ ಸಂಘದಲ್ಲಿ ನೊಂದಾಯಿಸಿ ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆಯಬೇಕಾದ ನಿಯಮವನ್ನು ಬದಲಾಯಿಸುವ ಬಗ್ಗೆ ಚಿಂತನೆ ಇದೆ. ಈ ನಿಟ್ಟಿನಲ್ಲಿ ಹಲವು ಬಾರಿ ಚರ್ಚೆ ನಡೆಸಲಾಗಿದೆ. ಇದರ ಸಾಧಕಭಾದಕ ಚರ್ಚಿಸಲಾಗುವುದು. ಸಚಿವ ಸ್ಥಾನ ಸ್ವೀಕರಿಸಿದ ಕೂಡಲೆ ಇದಕ್ಕೆ ಸಂಬಂಧಪಟ್ಟ ಪ್ರಯತ್ನಗಳನ್ನು ಮಾಡಲಾಗಿದ್ದು ನಿಯಮಗಳನ್ನು ಸಡಿಲಿಸಲು ಇನ್ನಷ್ಟು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಶಾಲೆಗಳಲ್ಲಿ ಪಿಇಟಿ ತರಗತಿ ಇಲ್ಲದಿರುವುದರಿಂದ ತಾಲೂಕು ಕ್ರೀಡಾಂಗಣಗಳ ಹೊಣೆಗಾರಿಕೆಯನ್ನು ದೈಹಿಕ ಶಿಕ್ಷಕರಿಗೆ ನೀಡುವ ಬಗ್ಗೆ ಚಿಂತನೆಯಿದೆ. ಮಂಗಳೂರುನಲ್ಲಿ ನಡೆದ ಫೆಡರೇಶನ್ ಕಪ್‍ನಿಂದ ಉಳಿದ ಹಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಅಭಿವೃದ್ದಿಗೆ ಬಳಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಅಭಯಚಂದ್ರಜೈನ್ ಅವರು ಕ್ರೀಡಾ ಸಚಿವರಾದ ನಂತರ ಜಿಲ್ಲೆಯ ಕ್ರೀಡಾ ಕ್ಷೇತ್ರದ ಅಭಿವೃದ್ದಿಯಾಗಿದೆ. ಕೆಟ್ಟ ಸ್ಥಿತಿಯಲ್ಲಿದ್ದ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಕಂಡಿದೆ. ಇದೀಗ ಕ್ರೀಡಾ ವಸತಿ ನಿಲಯವು ಅಭಿವೃದ್ದಿ ಕಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹೀಂ, ದ.ಕ ಜಿಲ್ಲೆಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪಾಂಡುರಂಗಗೌಡ ಉಪಸ್ಥಿತರಿದ್ದರು.