ಡಿಡಿಸಿಎ ವಿವಾದ: ತನಿಖಾ ಆಯೋಗ ಅಸಾಂವಿಧಾನಿಕ - ಕೇಂದ್ರ
Update: 2016-01-08 23:44 IST
ಹೊಸದಿಲ್ಲಿ, ಜ.8: ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘದಲ್ಲಿ (ಡಿಡಿಸಿಎ) ನಡೆದಿದೆಯೆನ್ನಲಾಗಿರುವ ಭ್ರಷ್ಟಾಚಾರದ ತನಿಖೆಗಾಗಿ ದಿಲ್ಲಿ ಸರಕಾರ ನೇಮಿಸಿರುವ ಗೋಪಾಲ ಸುಬ್ರಹ್ಮಣ್ಯಂ ಸಮಿತಿಯು ‘ಸಂವಿಧಾನ ಬಾಹಿರ ಹಾಗೂ ಕಾನೂನು ಬಾಹಿರವೆಂದು’ ಕೇಂದ್ರ ಸರಕಾರ ಶುಕ್ರವಾರ ಹೇಳಿದೆ.
ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಹೊರಡಿಸಿರುವ ನೋಟಿಫಿಕೇಶನ್ ಒಂದರಲ್ಲಿ ದಿಲ್ಲಿಯು ಸಂಪೂರ್ಣ ಸ್ಥಾನಮಾನ ಹೊಂದಿರುವ ರಾಜ್ಯವಲ್ಲದ ಕಾರಣ, ಅದಕ್ಕೆ ಅಂತಹ ಸಮಿತಿಯನ್ನು ನೇಮಿಸುವ ಅಧಿಕಾರವಿಲ್ಲವೆಂದು ಗೃಹ ಸಚಿವಾಲಯ ತಿಳಿಸಿದೆ. ಅದರಂತೆ ಗೃಹ ಸಚಿವಾಲಯವು, ದಿಲ್ಲಿ ಸರಕಾರದ ಜಾಗೃತ ನಿರ್ದೇಶನಾಲಯ ಹೊರಡಿಸಿರುವ ಅಧಿಸೂಚನೆಯು ಅಸಾಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದ್ದು, ಅದಕ್ಕೆ ಕಾನೂನು ಬದ್ಧ ಪರಿಣಾಮವಿಲ್ಲವೆಂದು ತೀರ್ಮಾನಿಸಿದೆಯೆಂದು ಎಲ್.ಜಿ ಕಚೇರಿ ಗುರುವಾರ ಹೊರಡಿಸಿರುವ ಪತ್ರವೊಂದರಲ್ಲಿ ಹೇಳಿದೆ.