×
Ad

ಸಂವಿಧಾನದ ಪರಿಷ್ಕರಣೆ ಬಿಜೆಪಿ ಅಜೆಂಡಾ: ಬಂಜಗೆರೆ

Update: 2016-01-09 00:11 IST

ಪ್ರಸ್ತುತ ಪಾಕ್ಷಿಕದ ‘ಹತ್ತರ ಹರುಷ’ ಕಾರ್ಯಕ್ರಮ
ಮಂಗಳೂರು, ಜ.8: ಸಂವಿಧಾನವನ್ನು ಪರಿಷ್ಕರಣೆ ಮಾಡುವುದು ಸಂಘಪರಿವಾರದ ನಿಜವಾದ ಅಜೆಂಡಾ. ಸಂವಿಧಾನದ ವಿರೋಧಿಯಾಗಿರುವ ಬಿಜೆಪಿ ಅಧಿಕಾರದಲ್ಲಿದ್ದು, ದೇಶದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಿ ಶಾಂತಿ ಕಾಪಾಡುವ ಹೆಸರಿನಲ್ಲಿ ಮಿಲಿಟರಿ ಆಡಳಿತವನ್ನು ತರಲು ಹುನ್ನಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಹಿಟ್ಲರ್, ಮುಸೋಲಿನಿಯ ಪುನರಾವತಾರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ಪುರಭವನದಲ್ಲಿ ಇಂದು ನಡೆದ ‘ಪ್ರಸ್ತುತ’ ಪಾಕ್ಷಿಕದ ‘ಹತ್ತರ ಹರುಷ’ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಮತ್ತು 5 ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಸಾಂಸ್ಕೃತಿಕ ವೌಲ್ಯದ ಹೆಸರಿನಲ್ಲಿ ವೌಢ್ಯಾಚರಣೆಗೆ ಬೆಂಬಲ ನೀಡಲಾಗುತ್ತಿದೆ. ವೌಢ್ಯಾಚರಣೆಯನ್ನು ವಿರೋಧಿ ಸುವವರು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ವೌಢ್ಯವನ್ನು ಬೆಂಬಲಿಸುವವರನ್ನು ಸಂಸ್ಕೃತಿರಕ್ಷಕರು ಎಂದು ಗೌರವಿಸಲಾಗುತ್ತಿದೆ. ನಂಬಿಕೆಯ ಹೆಸರಿನಲ್ಲಿ ಕೆಳವರ್ಗದವರನ್ನು ನಿರಂತರ ಶೋಷಣೆ ಮಾಡಲಾಗುತ್ತಿದೆ. ಯಾವುದೇ ಒಂದು ಆಚರಣೆ ಯಾವುದೇ ಸಮುದಾಯಕ್ಕೆ ಅವಮಾನ ಎಂದು ಕಂಡರೆ ಅದನ್ನು ನಿಲ್ಲಿಸಬೇಕು. ಮುಜರಾಯಿ ದೇವಸ್ಥಾನಗಳಲ್ಲಿ ನಡೆಯುವ ಮಡೆಸ್ನಾನ, ಪಂಕ್ತಿಭೇದವನ್ನು ಕೊನೆಗಾಣಿಸಬೇಕು ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಪ್ರಸ್ತುತ ರಾಜಕೀಯವೆಂದರೆ ಜಾತಿಗಳ ಸಮೀಕರಣ, ಸಂಪನ್ಮೂಲಗಳ ಕ್ರೋಡೀಕರಣವೆಂಬಂತಾಗಿದೆ. ಆದ್ದರಿಂದ ಕೆಳವರ್ಗದ ಜನರ ಕೈಗೆ ಅಧಿಕಾರ ಸಿಗಬೇಕು. ಮೇಲ್ವರ್ಗದ ಕೈಯಲ್ಲಿರುವ ಅಧಿಕಾರವನ್ನು ತಪ್ಪಿಸಬೇಕಾಗಿದೆ ಎಂದರು.

ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ತಮ್ಮ ಶತ್ರುಗಳ್ಯಾರು, ಸ್ನೇಹಿತರ್ಯಾರು ಎಂಬುದೇ ಗೊತ್ತಿಲ್ಲ. ಅಲ್ಪಸಂಖ್ಯಾತರು ದಲಿತರೊಂದಿಗಿದ್ದರೆ ಸುರಕ್ಷಿತವಾಗಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ.ಶರೀಫ್ ಮಾತನಾಡಿ, ಜಗತ್ತಿನ ಭಯೋತ್ಪಾದನೆಗಿಂತ ಭಯೋತ್ಪಾದನೆಯ ವರದಿಗಳು ಭೀಕರವಾಗಿ ಬರುತ್ತಿದೆ. ಇಂದಿನ ಮಾಧ್ಯಮಗಳು ‘ಇಸ್ಲಾಂ ಫೋಬಿಯಾ’ವನ್ನು ಸೃಷ್ಟಿಸಿವೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೊ, ಮೈಸೂರು ವಿವಿಯ ಮಾಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶ್ ಚಂದ್ರಗುರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರ.ಕಾರ್ಯದರ್ಶಿ ಯಾಸಿರ್ ಹಸನ್, ನ್ಯಾಷನಲ್ ವಿಮೆನ್ಸ್ ಫ್ರಂಟ್ ಅಧ್ಯಕ್ಷೆ ಶಾಹಿದಾ ಅಸ್ಲಮ್, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಎಂಪವರ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಇ.ಎಂ. ಅಬ್ದುರ್ರಹ್ಮಾನ್, ಎಸ್‌ಡಿಪಿಐ ಮುಖಂಡ ದೇವನೂರು ಪುಟ್ನಂಜ, ‘ಬಾರುಕೋಲು’ ಪಾಕ್ಷಿಕ ಸಂಪಾದಕ ರಂಗಸ್ವಾಮಿ, ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ. ದಾರಿಮಿ, ಸನ್ಮಾರ್ಗ ಪತ್ರಿಕೆ ಸಂಪಾದಕ ಎ.ಕೆ.ಕುಕ್ಕಿಲ, ಪವಿತ್ರ ಸಂದೇಶ ಪತ್ರಿಕೆ ಸಂಪಾದಕ ಎಚ್.ಎ. ಮುಹಮ್ಮದ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ಕವಿಸಿಂಚನ ಎಂಬ ಬಹುಭಾಷ ಕವಿಗೋಷ್ಠಿ ನಡೆಯಿತು.


ಐದು ಕೃತಿಗಳ ಬಿಡುಗಡೆ
ಕಾರ್ಯಕ್ರಮದಲ್ಲಿ ಸ್ತುತಿ ಪಬ್ಲಿಕೇಶನ್ ಪ್ರಕಟಿಸಿದ ಅರ್ಶದ್ ಮುಹಮ್ಮದ್ ನದ್ವಿ ಬರೆದ ‘ಉಲಮಾ ಹೋರಾಟಗಾರರು’, ಎಸ್.ಎಂ.ಮುಶ್ರಫ್ ಬರೆದ ‘ಕರ್ಕರೆಯನ್ನು ಕೊಂದವರ್ಯಾರು’, ಅಬ್ದುಲ್ ಹಮೀದ್ ಬರೆದ ‘ಸತ್ಯವಿಶ್ವಾಸಿಯ ದಿನಚರಿ’, ಇ.ಎಂ ಅಬ್ದುರ್ರಹ್ಮಾನ್ ಬರೆದ ‘ಮುಸ್ಲಿಂ ಸಬಲೀಕರಣ’, ಎ.ಸಯೀದ್ ಬರೆದ ‘ಅನ್ಪಾಲ್’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News