×
Ad

ಬಂದ್ ಮುನ್ನ ಜಿಲ್ಲಾಡಳಿತದ ಗಮನಕ್ಕೆ ತನ್ನಿ: ಸಚಿವ ರೈ

Update: 2016-01-09 00:19 IST

ಏಳು ದಿನಗಳಲ್ಲಿ ಚರ್ಚೆಗೆ ಅವಕಾಶ

ಮಂಗಳೂರು, ಜ.8: ಬಂದ್ ಸಾರ್ವಜನಿಕ ಆಸ್ತಿಪಾಸ್ತಿ ಜೊತೆಗೆ ಪ್ರಾಣಹಾನಿಗೂ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ, ಆ ಮನೋಸ್ಥಿತಿಯಿಂದ ಸಂಘಟನೆಗಳು ದೂರವಿರಬೇಕು. ಒಂದು ವೇಳೆ ಬಂದ್ ನಡೆಸುವ ಅನಿವಾರ್ಯ ಪರಿಸ್ಥಿತಿ ಏರ್ಪಟ್ಟಾಗ ಸಮಸ್ಯೆ ಅಥವಾ ಬೇಡಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ, 7 ದಿನಗಳಲ್ಲಿ ಚರ್ಚೆಗೆ ಅವಕಾಶ ನೀಡಿ ಸ್ಪಂದಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಇಂದು ದಕ್ಷಿಣ ಕನ್ನಡವನ್ನು ಬಂದ್ ಮುಕ್ತ ಜಿಲ್ಲೆ ಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ನಾಯಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾ ನಾಡಿದರು. ಸಭೆಯಲ್ಲಿ ಕೆಲವರನ್ನು ಹೊರತುಪಡಿಸಿ ಹೆಚ್ಚಿನವರಿಂದ ಬಂದ್‌ಮುಕ್ತ ಜಿಲ್ಲೆಯನ್ನಾಗಿಸುವ ಬಗ್ಗೆ ಸಹಮತ ವ್ಯಕ್ತವಾದರೂ ಪರ್ಯಾಯ ವ್ಯವಸ್ಥೆಯನ್ನು ಸೂಚಿಸುವಂತೆ ಆಗ್ರಹ ವ್ಯಕ್ತವಾದಾಗ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾತ್ರವಲ್ಲದೆ, ಸ್ವಯಂಪ್ರೇರಿತ ಬಂದ್‌ನಿಂದ ದೂರವಿರುವಂತೆ ಮನವಿ ಮಾಡಿದ ಅವರು, ಸಮಸ್ಯೆ ಹಾಗೂ ಬೇಡಿಕೆಗಳಿಗಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇವೆಯಾದರೂ, ಅದರಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ, ಸಾರ್ವಜನಿಕ ಆಸ್ತಿಗೆ ಭಂಗ ವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ ಎಂದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಬಂದ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವೊಂದಕ್ಕೆ 160 ಕೋಟಿ ರೂ. ಆರ್ಥಿಕ ನಷ್ಟವಾಗುತ್ತಿದೆ. ಬಲಾತ್ಕಾರದ ಬಂದ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಾಗಿ ನ್ಯಾಯಾಲಯಗಳ ಸೂಚನೆ ಇದೆ. ಅದರಂತೆ ಬಂದ್‌ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಮಾತನಾಡಿ, ಜಿಲ್ಲಾಡಳಿತ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸದಾ ಸಿದ್ಧವಿರುತ್ತದೆ. ಬಂದ್ ಬೇಡ ಎಂಬುದು ಬಹುತೇಕ ಸಾರ್ವಜನಿಕರ ನಿಲುವು ಕೂಡಾ. ಬಂದ್ ಮಾತ್ರ ಸಮಸ್ಯೆಗೆ ಪರಿಹಾರವಲ್ಲ. ಬಂದ್‌ನಿಂದ ತೊಂದರೆಗೆ ಒಳಗಾಗುವುದು ಜಿಲ್ಲೆಯ ಜನತೆ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬರಿಗೂ ಶಾಂತಿಯುತ ಪ್ರತಿಭಟನೆ ಮಾಡುವ ಹಕ್ಕಿದ್ದರೂ ಇನ್ನೊಬ್ಬರಿಗೆ ತೊಂದರೆ ಮಾಡುವ ಹಕ್ಕಿಲ್ಲ ಎಂದು ನುಡಿದರು. ಪೊಲೀಸ್ ಇಲಾಖೆಯ ಕಾನೂನು ಸಲಹೆಗಾರ ಮಾತನಾಡಿ ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪಿನನ್ವಯ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಂದ್ ಬಗ್ಗೆ ವಿಧಾನ ಮಂಡಲದಲ್ಲಿ ಚರ್ಚಿಸಿ ಕಾನೂನು ಅನುಷ್ಠಾನಗೊಳಿಸಲು ಸರಕಾರ ಮುಂದಾಗಲಿ ಎಂದು ಮಾನವ ಹಕ್ಕುಗಳ ಸಂಘಟನೆಯ ಕೆ. ಬಾಲಕೃಷ್ಣ ರೈ ಅಭಿಪ್ರಾಯಿಸಿದರೆ, ಬಂದ್‌ನಿಂದ ತೊಂದರೆ ಆಗುವುದು ನಿಜವಾಗಿದ್ದರೂ, ಸಾಮಾಜಿಕ ವ್ಯವಸ್ಥೆಯಲ್ಲಿ ಬಂದ್ ಕೂಡಾ ಹೋರಾಟದ ಒಂದು ಭಾಗವಾಗಿರುವುದರಿಂದ ಅದನ್ನು ಸಂಪೂರ್ಣವಾಗಿ ನಿಷೇಧಿಸುವುದು ಸರಿಯಲ್ಲ. ಹಾಗಾಗಿ ಬಂದ್ ಮುಕ್ತಗೊಳಿಸಲು ಸಹಮತ ಇಲ್ಲ ಎಂದು ಸಿಪಿಎಂ ಮುಖಂಡ ವಸಂತ ಆಚಾರಿ ಹೇಳಿದರು.

ಕೆಸಿಸಿಐ ಮಾಜಿ ಕೋಶಾಧಿಕಾರಿ ಅಹ್ಮದ್ ಬಾವ ಮಾತನಾಡಿ, ಬಂದ್‌ನಿಂದ ಜಿಲ್ಲೆಯಲ್ಲಿ ಹೂಡಿಕೆ ಹರಿದುಬರಲು ಅಡಚಣೆಯಾಗುತ್ತಿದ್ದು, ಬಂದ್ ಮುಕ್ತಗೊಳಿಸಬೇಕು ಎಂದರು. ಬಂದ್‌ಗೆ ಕರೆ ನೀಡುವವರು ಜಿಲ್ಲಾಡಳಿತಕ್ಕೆ ಮುಂಚಿತವಾಗಿ ತಿಳಿಸುವುದಲ್ಲದೆ, ಬಂದ್‌ನಲ್ಲಿ ಆಗುವ ತೊಂದರೆ, ನಷ್ಟಗಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು. ಪ್ರಾಣಹಾನಿ ಸಂಭವಿಸಿದರೆ ಬಂದ್‌ಗೆ ಕರೆ ನೀಡಿದವರನ್ನು ಆರೋಪಿಗಳನ್ನಾಗಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ ಅಭಿಪ್ರಾಯಿಸಿದರು.

ಸಭೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಮಾಜಿ ಮೇಯರ್ ಅಶ್ರಫ್, ವಿಎಚ್‌ಪಿ ಮುಖಂಡ ಜಗದೀಶ ಶೇಣವ, ಬಿಜೆಪಿ ನಾಯಕ ನಿತಿನ್ ಕುಮಾರ್, ಮುಸ್ಲಿಮ್ ವರ್ತಕರ ಸಂಘದ ಅಲಿ ಹಸನ್, ಗೋ ಸಂರಕ್ಷಣಾ ಸಮಿತಿಯ ಕಟೀಲು ದಿನೇಶ್ ಪೈ, ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಡಿ.ಎಂ.ಅಸ್ಲಂ, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜಪ್ಪು, ರೈತಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್, ಸಿಟಿಝನ್ ಫೋರಂನ ವಿದ್ಯಾ ದಿನಕರ್, ಕರ್ನಾಟಕ ರಕ್ಷಣಾ ವೇದಿಕೆಯ ರಹೀಂ ಉಚ್ಚಿಲ್, ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಕೆ. ವಿಶ್ವನಾಥ್, ವಿಕ್ಟರ್ ವಾಸ್, ಇಕ್ಬಾಲ್ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಪಿ.ಐ., ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ, ಡಿಸಿಪಿ ಶಾಂತರಾಜು ಉಪಸ್ಥಿತರಿದ್ದರು.

ಔದಾರ್ಯವನ್ನು ದೌರ್ಬಲ್ಯ ಎಂದು ತಿಳಿಯದಿರಿ

ಜಿಲ್ಲೆಯಲ್ಲಿ ಸಂಭವಿಸುವ ಅಹಿತಕರ ಘಟನೆಗಳ ಸಂದರ್ಭ ಜಿಲ್ಲಾಡಳಿತದ ಔದಾರ್ಯವನ್ನು ಯಾರೂ ಕೂಡಾ ದೌರ್ಬಲ್ಯ ಎಂದು ತಿಳಿದುಕೊಳ್ಳಬಾರದು ಎಂದು ಸಚಿವ ರೈ ನುಡಿದರು. ಬಲಾತ್ಕಾರದ ಬಂದ್‌ಗಳು ನಡೆದಾಗ ಇದಕ್ಕೆ ಕಾರಣಕರ್ತರಾದವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಬಂದ್ ವಿಚಾರದ ಚರ್ಚೆಯ ಸಂದರ್ಭದಲ್ಲಿ ಎತ್ತಿನ ಹೊಳೆ ಯೋಜನೆ ವಿರೋಧಿ ಹೋರಾಟವೂ ಪ್ರತಿಧ್ವನಿಸಿತು. ಯೋಜನೆಗೆ ಸಂಬಂಧಿಸಿ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದನೆ ದೊರಕದಾಗ ಬಂದ್ ನಡೆಸುವ ಪರಿಸ್ಥಿತಿ ನಿರ್ಮಾ ಣವಾಗಿತ್ತು. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಂ ಡಿದ್ದರೆ ಬಂದ್ ಮಾಡುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಸಭೆಯಲ್ಲಿ ರಹೀಂ ಉಚ್ಚಿಲ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ, ಎಂಟು ವರ್ಷಗಳ ಹಿಂದೆ ಈ ಯೋಜನೆಗೆ ಮುಂದಾಗುವಾಗ ಆಗದ ಹೋರಾಟ ಈಗ ನಡೆಸುತ್ತಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು. ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಜಿಲ್ಲೆ ಯಲ್ಲಿ ಪ್ರಥಮವಾಗಿ ವಿಚಾರ ಸಂಕಿರಣವನ್ನು ನಾನು ಆಯೋಜಿಸಿದ್ದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News