ಪೆರಾಬೆ ಗ್ರಾಮ ಸಂಪೂರ್ಣ ಸೌರಶಕ್ತಿಗೆ 1.45 ಕೋ.ರೂ. ಕ್ರಿಯಾ ಯೋಜನೆ
ಮಂಗಳೂರು, ಜ.8: ಪುತ್ತೂರು ತಾಲೂಕಿನ ಪೆರಾಬೆೆ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವಾಗಿಸಲು 1,44,64,000 ರೂ. ಕ್ರಿಯಾಯೋಜನೆಯನ್ನು ಪೆರಾಜೆ ಸೌರದೀಪ ಅನುಷ್ಠಾನ ಸಮಿತಿಯು ತಯಾರಿಸಿ ಜಿಲ್ಲಾಧಿ ಕಾರಿ ಎ.ಬಿ.ಇಬ್ರಾಹೀಂ ಹಾಗೂ ಜಿಪಂ ಸಿಇಒ ಪಿ.ಐ.ವಿದ್ಯಾರಿಗೆ ಸಲ್ಲಿಸಿದೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಪೆರಾಬೆೆ ಸೌರದೀಪ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾದ ಯಮುನಾ ಎಸ್. ರೈ ಮತ್ತು ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಈ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಪೆರಾಬೆ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವನ್ನಾಗಿ ಮಾರ್ಚ್ 15 ರೊಳಗೆ ಪರಿವರ್ತಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ಪೆರಾಬೆೆ ಗ್ರಾಮಕ್ಕೆ ಸೌರಶಕ್ತಿ ಅಳವಡಿಕೆಗೆ ಅನುದಾನ ನೀಡಲು ಸೌರದೀಪ ಅನುಷ್ಠಾನ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ಈ ಬಗ್ಗೆ ದೇವಾಲಯ ಸಮಿತಿಗೆ ಮನವಿ ನೀಡಿದಲ್ಲಿ ಸರಕಾರದಿಂದ ಅನುಮೋದನೆ ಪಡೆಯಲು ಯತ್ನಿಸುವುದಾಗಿ ಮುಜರಾಯಿ ಇಲಾಖೆ ತಹಶೀಲ್ದಾರ್ ಪ್ರಭಾಕರ್ ಹೇಳಿದರು. ಮೆಸ್ಕಾಂ ವತಿಯಿಂದ ಬೀದಿ ದೀಪಗಳ ಅಳವಡಿಕೆಗೆ ಮಂಡಳಿ ಸಭೆಯಲ್ಲಿ ವಿಷಯ ಚರ್ಚಿಸುವುದಾಗಿ ಮೆಸ್ಕಾಂ ಅಧಿಕಾರಿ ನಂಜಪ್ಪತಿಳಿಸಿದರು. ಸಭೆಯಲ್ಲಿ ಎಂಆರ್‌ಪಿಎಲ್, ನಬಾರ್ಡ್ ಇನ್ನಿತರ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ತಮ್ಮ ಶಾಸಕ ನಿಧಿಯಿಂದ ಪೆರಾಬೆಯ 40 ಎಂಡೋ ಪೀಡಿತರ ಮನೆಗಳಿಗೆ 8.36 ಲಕ್ಷ ರೂ. ಅನುದಾನದಲ್ಲಿ ಸೌರಶಕ್ತಿಯ ಎಲ್‌ಇಡಿ ಬಲ್ಬ್ ಮತ್ತು 1 ಫ್ಯಾನ್ ಅಳವಡಿಕೆಗೆ ಭರವಸೆ ನೀಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಪೆರಾಬೆ ಗ್ರಾಮಕ್ಕೆ 5 ಲಕ್ಷ ರೂ. ಸಹಾಯ ಒದಗಿಸುವ ಭರವಸೆ ನೀಡಿದೆ.