ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊಸ ಕ್ಯಾಂಪಸ್ ಉದ್ಘಾಟನೆ
ಮಂಗಳೂರು, ಜ.9:ರಾಷ್ಟ್ರೀಯ ಹೆದ್ದಾರಿ 66 ಜೆಪ್ಪಿನಮೊಗರುವಿನಲ್ಲಿರುವ ಸಿಬಿಎಸ್‌ಇ ಸಂಯೋಜಿತ ಮಾಂಟೆಸ್ಸರಿಯಿಂದ ಪಿಯುವರೆಗಿನ ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊಸ ಕ್ಯಾಂಪಸನ್ನು ಇಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಧುನಿಕ ಶಿಕ್ಷಣ ಪದ್ಧತಿಗೆ ಪೂರಕವಾಗಿ ನೂತನ ಕ್ಯಾಂಪಸ್ ನಿರ್ಮಾಣಗೊಂಡಿದೆ . ಧರ್ಮ, ಜಾತಿ, ಮತವನ್ನು ಮರೆತು ಎಲ್ಲರೂ ಗುಣಮಟ್ಟದ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಬಾಳಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣವನ್ನು ಶಿಕ್ಷಣ ಸಂಸ್ಥೆ, ಹೆತ್ತವರು, ಶಿಕ್ಷಕರು ಪೂರೈಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಶಿಸ್ತು ಬಹಳ ಮುಖ್ಯ. ವಿದ್ಯಾರ್ಥಿಗಳು ಮನೆಯಲ್ಲಿಯೂ ಶಿಸ್ತುಬದ್ದವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಹೆತ್ತವರಿಗಿದೆ. ಮಕ್ಕಳಲ್ಲಿ ಶಿಸ್ತು ಮೂಡಿಸಿದರೆ ಸಮಾಜ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯಲ್ಲಿ ಕೇವಲ ಆರ್ಥಿಕವಾಗಿ ಸುದೃಢರಾದವರಿಗೆ ಮಾತ್ರ ಅವಕಾಶ ನೀಡದೆ, ಶೇ.10ರಷ್ಟಾದರೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಶಿಕ್ಷಣದಿಂದ ಒಂದು ಕುಟುಂಬ ಮಾತ್ರವಲ್ಲದೆ ಸಮಗ್ರ ದೇಶದ ಅಭಿವೃದ್ಧಿಯಾಗುತ್ತದೆ. ಶಿಕ್ಷಣ ಸಂಸ್ಥೆಗಳು ಪೋಷಕರ ವಿಶ್ವಾಸ ಗಳಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬದಲಾದ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಸ್ಕೂಲ್ ರೂಪುಗೊಂಡಿದೆ ಎಂದರು.
ಸಂಸ್ಥೆಯ ಚೇರ್‌ಮೆನ್ ಹೈದರ್ ಆಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕಾರ್ಪೊರೇಟರ್ ಸುರೇಂದ್ರ, ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಯೆನೆಪೋಯ ಗ್ರೂಪ್‌ನ ಮೊಹಮ್ಮದ್ ಕುಂಞಿ, ಹೈದರ್ ಪರ್ತಿಪ್ಪಾಡಿ, ರಶೀದ್, ಡಾ.ಹಸೀಬ್, ಕೆ.ಅಬೂಬಕ್ಕರ್, ಎಸ್‌ಎಂಆರ್ ಗ್ರೂಪ್‌ನ ರಶೀದ್, ಪ್ರಾಂಶುಪಾಲೆ ಫಿರೋಝಾ ಫಯಾಜ್ ಉಪಸ್ಥಿತರಿದ್ದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.