ಪ್ಲಾಸ್ಟಿಕ್ ಪಾರ್ಕ್ ಗೆ ಮುಡಿಪು ಅಥವಾ ಶಿಬರೂರು ಆಯ್ಕೆ

Update: 2016-01-09 13:43 GMT

ಮಂಗಳೂರು,ಜ.9: ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಮುಡಿಪು ಕೆನರಾ ಕೈಗಾರಿಕಾ ವಲಯ ಅಥವಾ ಶಿಬರೂರು ಪ್ರದೇಶದಲ್ಲಿ ಜಾಗವನ್ನು ಗುರುತಿಸಲಾಗಿದೆ.

   ಎಂಆರ್‌ಪಿಎಲ್ ಮುಂದಿನ ಹಂತದಲ್ಲಿ ಪಾಲಿಎಥಿಲಿನ್ ಘಟಕಗಳನ್ನು ಸ್ಥಾಪಿಸಲಿದ್ದು ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಗೆ ಉತ್ತಮ ಅವಕಾಶವನ್ನು ಹೊಂದಿರುವುದರಿಂದ ಮಂಗಳೂರಿನ ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಸಂಘದವರು ಕೇಂದ್ರ ಸರಕಾರದ ಕೆಮಿಕಲ್ಸ್ ಹಾಗೂ ಪೆಟ್ರೋ ಕೆಮಿಕಲ್ಸ್ ಇಲಾಖೆಗೆ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವಂತೆ ಮನವಿಯನ್ನು ಮಾಡಿತ್ತು.

      ಈ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರಸಚಿವ ಅನಂತ್ ಕುಮಾರ್ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ರಾಜ್ಯ ಸರಕಾರವನ್ನು ಕೂಡಲೇ ಸೂಕ್ತ ಪ್ರಸ್ತಾವನೆಯನ್ನು ಕಳುಹಿಸಲು ಕೋರಲಾಗಿದ್ದು ಅದರಂತೆ ರಾಜ್ಯ ಸರಕಾರವು ಸೂಕ್ತ ಜಾಗವನ್ನು ಗುರುತಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿತ್ತು.

              ಈ ಸೂಚನೆಯಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಡಿಪು ಕೆನರಾ ಕೈಗಾರಿಕಾ ವಲಯ ಅಥವಾ ಶಿಬರೂರು ಪ್ರದೇಶದಲ್ಲಿ ಸ್ಥಾಪಿಸಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸುವ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಫೆ.3ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯುವ ಇನ್‌ವೆಸ್ಟ್ ಕರ್ನಾಟಕ 2016 ಗ್ಲೋಬಲ್ ಇನ್‌ವೆಸ್ಟರ್ಸ್‌ ಮೀಟ್ ನಲ್ಲಿ ಚಾಲನೆ ನೀಡಲಾಗುತ್ತದೆ.

         

             

         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News