ಮೇಘಾಲಯ: ಮಾರುಕಟ್ಟೆಯಲ್ಲಿ ಸ್ಫೋಟ; 2 ಸಾವು
ಶಿಲಾಂಗ್, ಜ. 9: ಮೇಘಾಲಯದ ಈಸ್ಟ್ ಗರೋ ಹಿಲ್ಸ್‌ನ ವಿಲಿಯಂ ನಗರ್ ಮಾರುಕಟ್ಟೆಯಲ್ಲಿ ಶನಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ.
ಉಗ್ರಗಾಮಿ ಸಂಘಟನೆ ಗರೋ ನ್ಯಾಶನಲ್ ಲಿಬರೇಶನ್ ಆರ್ಮಿ (ಜಿಎನ್‌ಎಲ್‌ಎ) ಸ್ಫೋಟದ ರೂವಾರಿ ಎಂದು ಶಂಕಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಈ ಪ್ರದೇಶದಿಂದ ಜನರನ್ನು ತೆರವುಗೊಳಿಸಿದರು ಹಾಗೂ ಇತರ ಸ್ಫೋಟಕಗಳು ಇವೆಯೇ ಎಂಬುದನ್ನು ಪತ್ತೆಹಚ್ಚಲು ಮಾರುಕಟ್ಟೆಯನ್ನು ಜಾಲಾಡಿದರು ಎಂದು ಐಜಿಪಿ ಜಿ.ಎಚ್.ಪಿ. ರಾಜು ತಿಳಿಸಿದರು.
ವಾರದ ಸಂತೆಯಲ್ಲಿ ಸುಮಾರು ಮಧ್ಯಾಹ್ನ 12.45ರ ವೇಳೆಗೆ ಪ್ರಬಲ ಸುಧಾರಿತ ಸ್ಫೋಟಕವೊಂದು ಸಿಡಿಯಿತು. ಸ್ಫೊಟದಿಂದ ಮಾರುಕಟ್ಟೆಗೆ ಹೊಂದಿಕೊಂಡಿರುವ ಮದ್ಯದಂಗಡಿ ಮತ್ತು ಹಲವು ಕೋಣೆಗಳು ಧ್ವಂಸಗೊಂಡವು ಹಾಗೂ ಒಂಬತ್ತು ಮಂದಿ ಗಾಯಗೊಂಡರು.
ಜಿಎನ್‌ಎಲ್‌ಎ 2010ರ ಬಳಿಕ ಗರೋ ಹಿಲ್ಸ್ ವಲಯದಲ್ಲಿ ಸಕ್ರಿಯವಾಗಿದ್ದು, ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಗಳ ಅಪಹರಣ, ಲೂಟಿ ಮತ್ತು ಹತ್ಯೆಯಲ್ಲಿ ತೊಡಗಿದೆ.