ಉಡುಪಿ: ಶ್ರೀವಿಶ್ವೇಶ ತೀರ್ಥ ಮಾರ್ಗ ಲೋಕಾರ್ಪಣೆ
ಉಡುಪಿ, ಜ.9: ಐತಿಹಾಸಿಕ 5ನೆ ಬಾರಿಗೆ ಶ್ರೀಕೃಷ್ಣಪೂಜಾ ಸರ್ವಜ್ಞ ಪೀಠಾರೋಹಣಗೈಯಲು ಸಜ್ಜಾಗಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ರಾಷ್ಟ್ರಮಾನ್ಯ ಸಾಧನೆಗೆ ಉಡುಪಿ ನಗರಸಭೆ ಶ್ರೀಯ ಹೆಸರಿನಲ್ಲಿ ರಸ್ತೆಗೆ ಹೆಸರಿಟ್ಟು ನಾಗರಿಕ ಗೌರವ ಸಲ್ಲಿಸಿದೆ.
ಕಲ್ಸಂಕದಿಂದ (ವಾಹನ ನಿಲುಗಡೆ ಪ್ರದೇಶದ ಮೂಲಕ) ಶ್ರೀ ವಾದಿರಾಜ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ‘ಶ್ರೀವಿಶ್ವೇಶತೀರ್ಥ ಮಾರ್ಗ’ ಎಂದು ನಾಮಕರಣ ಗೊಳಿಸಲಾಗಿದೆ. ಪೇಜಾವರ ಮಠದ ಉಭಯ ಶ್ರೀಗಳು, ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಪ್ರಮೋದ್ ಮಧ್ವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಫಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಶ್ರೀವಿಶ್ವೇಶತೀರ್ಥ ಮಾರ್ಗ ಫಲಕವನ್ನು ಅನಾವರಣಗೊಳಿಸಿದರು.
ಈಗಾಗಲೆ ಬೆಂಗಳೂರು, ಮೈಸೂರಿನಲ್ಲಿ ಪ್ರಮುಖ ರಸ್ತೆಗೆ ಶ್ರೀಗಳ ಹೆಸರಿಟ್ಟು ಗೌರವಿಸಲಾಗಿದ್ದು, ಇದೀಗ ಉಡುಪಿಯಲ್ಲಿಯೂ ಪರ್ಯಾಯದ ಸಂದರ್ಭದಲ್ಲಿ ಒಂದು ರಸ್ತೆಗೆ ಶ್ರೀಗಳ ಹೆಸರಿಟ್ಟು ಗೌರವಿಸಬೇಕೆಂಬ ಪ್ರಸ್ತಾವನೆಯನ್ನು ಪರ್ಯಾಯ ಸ್ವಾಗತ ಸಮಿತಿ ನಗರಸಭೆಗೆ ಸಲ್ಲಿಸಿತ್ತು.
ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡ ನಗರಸಭೆ ಒಪ್ಪಿಗೆ ನೀಡಿತ್ತು. ಇದಕ್ಕಾಗಿ ಸ್ವಾಗತ ಸಮಿತಿ ನಗರಸಭೆಗೆ ಕೃತಜ್ಞತೆ ಸಲ್ಲಿಸಿದೆ.