ತೋಟತ್ತಾಡಿ: ಕಳವು ಆರೋಪಿಯ ಸೆರೆ
ಬೆಳ್ತಂಗಡಿ, ಜ.9: ತೋಟತ್ತಾಡಿ ಗ್ರಾಮದ ಕುರಿಯಾಕೋಸ್ ಎಂಬವರ ಮನೆಯಿಂದ ಡಿ.25ರಂದು ಚಿನ್ನ ನಗದು ಹಾಗೂ ಇತರ ವಸ್ತುಗಳನ್ನು ಕಳ್ಳತನ ಮಾಡಿದ್ದ ಪ್ರಕರಣದ ಆರೋಪಿ ತೋಟತ್ತಾಡಿ ಗ್ರಾಮದ ನಿವಾಸಿ ಪೀಟರ್ ಎಂ.ಜೆ. (36) ಎಂಬಾತನನ್ನು ಬೆಳ್ತಂಗಡಿ ಪೋಲೀಸರು ಬಂಧಿಸಿದ್ದಾರೆ. ಕಳ್ಳತನದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಚಾರ್ಮಾಡಿಯಿಂದ ಬೆಳ್ತಂಗಡಿ ಕಡೆಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಶುಕ್ರ ವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಕಳ್ಳತನ ಮಾಡಲಾಗಿದ್ದ 3.50 ಲಕ್ಷ ರೂ. ಮೌಲ್ಯದ ಸೊತ್ತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಬೆಳ್ತಂಗಡಿಯ ಕೊಶಮಟ್ಟಂ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ. ಕೆಲವು ಆಭರಣಗಳನ್ನು ಉಜಿರೆಯ ಚಿನ್ನದ ಅಂಗಡಿಗೆ ಮಾರಾಟ ಮಾಡಿದ್ದ. ಇಲ್ಲಿಂದ ಕದ್ದಿದ್ದ ರಬ್ಬರ್ ಶೀಟ್‌ಗಳನ್ನೂ ಮಾರಾಟ ಮಾಡಿದ ಅಂಗಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಮನೆಯಿಂದ ಕಳ್ಳತನ ಮಾಡಿದ್ದ ವಸ್ತುಗಳಲ್ಲಿ ತನಗೆ ಬೇಕಾದುದನ್ನು ತೆಗೆದುಕೊಂಡು ಉಳಿದ ದಾಖಲೆಗಳನ್ನು ಕಾಡಿನಲ್ಲಿ ಎಸೆದಿದ್ದ. ಆರೋಪಿ ಇದೆಲ್ಲವನ್ನೂ ತೋರಿಸಿಕೊಟ್ಟಿದ್ದು ಎಲ್ಲ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ನೆರಿಯ ಗ್ರಾಮದ ಬಸದಿ ಸಮೀಪ ನಾಯಿ ಕಟ್ಟೆ ಎಂಬಲ್ಲಿನ ನಿವಾಸಿ ಉಮರಬ್ಬ ಎಂಬವರ ಮನೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಪ್ರಕರಣದಲ್ಲಿಯೂ ಈತ ಭಾಗಿಯಾಗಿದ್ದಾನೆ. ಈತನ ಸ್ನೇಹಿತನೂ ಈ ಕೃತ್ಯದಲ್ಲಿ ನೆರವಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಂಗ ಬಂಧನ ವಿಧಿಸಿಸಲಾಗಿದೆ.