ಆಂಗಡಿಗೆ ನುಗ್ಗಿ 5 ಲಕ್ಷ ರೂ. ಕಳವು
Update: 2016-01-10 00:22 IST
ಬಂಟ್ವಾಳ, ಜ. 9: ಬಡಗಬೆಳ್ಳೂರು ರಾಜಶ್ರೀ ಜನರಲ್ ಸ್ಟೋರ್ ಅಂಗಡಿಗೆ ಶುಕ್ರವಾರ ರಾತ್ರಿ ನುಗ್ಗಿದ ಕಳ್ಳರು 5 ಲಕ್ಷ ರೂ. ನಗದು ಕಳವು ಮಾಡಿದ್ದಾಗಿ ಅಂಗಡಿ ಮಾಲಕ ವಿಶ್ವನಾಥ ಪೂಜಾರಿ ದೂರು ನೀಡಿದ್ದಾರೆ. ಶನಿವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆಯಲು ಬಂದಾಗ ಮುಂಬದಿ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿದ್ದು ಕಳವು ನಡೆದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಅಂಗಡಿಯ ಬಾಗಿಲು ಮುಚ್ಚಿ ಅದರ ಕೀಯನ್ನು ಚೀಲವೊಂದರಲ್ಲಿಟ್ಟುಕೊಂಡು ಹೋಗಲಾಗಿದ್ದು, ಬಳಿಕ ಅದು ಕಾಣೆಯಾಗಿತ್ತು. ಕೀ ಸಿಕ್ಕಿದವರು ಈ ಕೃತ್ಯ ನಡೆಸಿದ್ದಾಗಿ ಶಂಕಿಸಲಾಗಿದೆ.
ಜಮೀನು ಖರೀದಿ ವಿಚಾರವಾಗಿ ಸಂಗ್ರಹಿಸಿಟ್ಟಿದ್ದ 5 ಲಕ್ಷ ರೂ. ವನ್ನು ಅಂಗಡಿಯ ಒಳಗಿದ್ದ ಫ್ರಿಡ್ಜ್ ಹಿಂಬದಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಇರಿಸಿದ್ದು, ಅಲ್ಲಿಂದಲೇ ಹಣ ಕಳವು ಮಾಡಿರುವುದರಿಂದ ಪರಿಚಿತರು ಈ ಕೃತ್ಯ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.