ಮಣಿಪಾಲ: ಜಿ.ಶಂಕರ್ ಸಹಿತ ನಾಲ್ವರಿಗೆ ‘ಹೊಸ ವರ್ಷದ ಪ್ರಶಸ್ತಿ’ ಪ್ರದಾನ
ಮಣಿಪಾಲ, ಜ.9: ಶಿಕ್ಷಣ, ಆರೋಗ್ಯ, ಸಮಾಜ ಸೇವೆ ನನ್ನ ಗುರಿ. ಸರ್ವರ ಏಳಿಗೆಯತ್ತ ನನ್ನ ಚಿತ್ತ ಎಂದು ಉಡುಪಿಯ ಉದ್ಯಮಿ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಜಿ. ಶಂಕರ್ ಹೇಳಿದ್ದಾರೆ.
ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಷನ್, ಮಣಿಪಾಲ ವಿವಿ ಹಾಗೂ ಸಿಂಡಿಕೇಟ್ ಬ್ಯಾಂಕ್‌ಗಳು ನೀಡುವ ‘ಹೊಸ ವರ್ಷ ಪ್ರಶಸ್ತಿ’ಯನ್ನು ಟಿ. ಸತೀಶ್ ಯು. ಪೈ ಅವರಿಂದ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಲಾನ್‌ನಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಡಾ.ಶಂಕರ್ ಅವರೊಂದಿಗೆ ಖ್ಯಾತ ವೈದ್ಯ ಹಾಗೂ ಬೆಂಗಳೂರಿನ ಮಣಿಪಾಲ ಹಾಸ್ಪಿಟಲ್‌ನ ನಿರ್ದೇಶಕ ಡಾ.ಎಚ್.ಸುದರ್ಶನ್ ಬಲ್ಲಾಳ್, ಯಕ್ಷಗಾನ ವಿದ್ವಾಂಸ, ಲೇಖಕ, ಸಂಶೋಧಕ ಎಂ.ಪ್ರಭಾಕರ ಜೋಶಿ ಹಾಗೂ ಖ್ಯಾತ ಬ್ಯಾಂಕರ್, ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಲೆನ್ ಸಿ.ಎ. ಪಿರೇರಾ ಪ್ರಶಸ್ತಿಗೆ ಭಾಜನರಾದರು.
ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯುಕೇಷನ್ 1941ರಿಂದ ಪ್ರಾರಂಭಿಸಿ ಪ್ರತಿವರ್ಷ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ.
ಡಾ.ಸುದರ್ಶನ್ ಬಲ್ಲಾಳ್ ಅವರಿಗೆ ಮಣಿಪಾಲ ವಿವಿಯ ಚಾನ್ಸಲರ್ ಡಾ. ರಾಮದಾಸ ಎಂ.ಪೈ, ಎಂ.ಪ್ರಭಾಕರ ಜೋಶಿ ಅವರಿಗೆ ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಅಲೆನ್ ಪಿರೇರಾ ಅವರಿಗೆ ಸಿಂಡಿಕೇಟ್ ಬ್ಯಾಂಕ್‌ನ ಅಧ್ಯಕ್ಷ ಮತ್ತು ಸಿಇಒ ಅರುಣ್ ಶ್ರೀವಾಸ್ತವ ಪ್ರಶಸ್ತಿ ಪ್ರದಾನ ಮಾಡಿದರು.
ಅಕಾಡಮಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಕಾರ್ಯಕ್ರಮ ನಿರ್ವಹಿಸಿದರು.