ಉಡುಪಿ ಹಾಫ್ ಮ್ಯಾರಥಾನ್: ಆಳ್ವಾಸ್‌ನ ಕಾಂತಿಲಾಲ್- ಸೌಮ್ಯಗೆ ಪ್ರಶಸ್ತಿ
ಉಡುಪಿ : ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ಸಿಂಡಿಕೇಟ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಇಂದು ಏರ್ಪಡಿಸ ಲಾದ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕಾಂತಿಲಾಲ್ ಕುಂಭಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಸೌಮ್ಯ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಎದುರಿನಿಂದ ಆರಂಭಗೊಂಡ 21ಕಿ.ಮೀ. ದೂರದ ಈ ಮ್ಯಾರಥಾನ್ ಓಟವನ್ನು ಕಾಂತಿಲಾಲ್ 1:06:34 ಗಂಟೆಯಲ್ಲಿ ಕ್ರಮಿಸಿದರೆ, ಸೌಮ್ಯ 1:34:17:78 ಗಂಟೆಯಲ್ಲಿ ತಲುಪಿದರು. ಪುರುಷರ ವಿಭಾಗದಲ್ಲಿ ಆಳ್ವಾಸ್‌ನ ಚೋಟಲಾಲ್ ಪಾಟೀಲ್ ದ್ವಿತೀಯ ಮತ್ತು ಶಿಜು ಸಿ.ಪಿ. ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಶ್ರೇಯಾ ದ್ವಿತೀಯ ಮತ್ತು ಅಕ್ಷತಾ ತೃತೀಯ ಸ್ಥಾನ ಪಡೆದುಕೊಂಡರು.
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದಿಂದ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಎರಡೂ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಥಮ 50ಸಾವಿರ ರೂ., ದ್ವಿತೀಯ 25ಸಾವಿರ ರೂ. ಹಾಗೂ ತೃತೀಯ 15ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಎಂಡಿ ಅರುಣ್ ಶ್ರೀವಾಸ್ತವ್, ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ರೋಶನ್ ಮಹನಾಮ, ಕ್ರೀಡಾಪಟುಗಳಾದ ಅಶ್ವಿನಿ ನಾಚಪ್ಪ, ಬಾಬು ಶೆಟ್ಟಿ, ನಿಟ್ಟೆ ವಿವಿಯ ಕುಲಪತಿ ಡಾ.ವಿನಯ ಹೆಗ್ಡೆ, ಡಾ. ಎಚ್.ಎಸ್.ಬಲ್ಲಾಳ್, ರಘುಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.