×
Ad

ವಾರಾಹಿಯಿಂದ ನೀರಾವರಿ ಜೊತೆಗೆ ಕುಡಿಯುವ ನೀರು: ಸೊರಕೆ

Update: 2016-01-10 23:49 IST

ಹಾಲಾಡಿ, ಜ.10: ವಾರಾಹಿ ಯೋಜನೆಯ ಮೊದಲ ಹಂತದಿಂದ ವಾರ್ಷಿಕ 3,000 ಹೆಕ್ಟೇರ್ ಪ್ರದೇಶಗಳ ನೀರಾವರಿಗೆ ಬೇಕಾಗುವ ನೀರು ಹರಿಸುವುದರೊಂದಿಗೆ ಕುಂದಾಪುರ ಪುರಸಭೆಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ವಾರಾಹಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ 2016ನೆ ಬೇಸಿಗೆ ಹಂಗಾಮಿಗೆ ನೀರು ಹರಿಯುವ ಕಾರ್ಯಕ್ರಮದಂತೆ ಹಾಲಾಡಿ ಗ್ರಾಪಂ ವ್ಯಾಪ್ತಿಯ ಕುಳ್ಳುಂಜೆ ಗ್ರಾಮದ ಭರತ್ಕಲ್‌ನಲ್ಲಿ ನಿರ್ಮಿಸಲಾದ ನಂ.1 ವಿತರಣಾ ಕಾಲುವೆಯ ನೀರಿನ ಹರಿವಿಗೆ ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ಭಾಗದಲ್ಲಿ ಕೃಷಿಗೆ ನೀರು ಬಿಡುವಂತೆ ರೈತರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಇದೀಗ ಪ್ರಧಾನ ಕಾಲುವೆಗಳ ಮೂಲಕ ಹಾಗೂ ವಿತರಣಾ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ವೇಗ ನೀಡಿ ಶೇ.60ರಷ್ಟು ಕೆಲಸವನ್ನು ಎರಡೂವರೆ ವರ್ಷಗಳಲ್ಲಿ ಮುಗಿಸಲಾಗಿದೆ ಎಂದರು.
 ಇದೀಗ ವಾರಾಹಿ ನೀರನ್ನು ಬಳಸಿಕೊಂಡು ಕುಂದಾಪುರ ಪುರಸಭಾ ವ್ಯಾಪ್ತಿ ಹಾಗೂ ಆಸುಪಾಸಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 38 ಕೋ.ರೂ. ವೆಚ್ಚದ ಪ್ರಸ್ತಾವನೆಗೆ ಮಂಜೂರಾತಿಯನ್ನು ನೀಡಲಾಗಿದೆ ಎಂದೂ ಸೊರಕೆ ತಿಳಿಸಿದರು.
ಯೋಜನೆಯ ಸುಮಾರು 268 ಹೆಕ್ಟೇರ್ ಅರಣ್ಯ ಪ್ರದೇಶಗಳ ಭೂಸ್ವಾಧೀನಕ್ಕೆ ಬಾಕಿ ಇದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಆನ್‌ಲೈನ್ ಮೂಲಕ ಪ್ರಸ್ತಾಪ ಕಳುಹಿಸಿ ಮಂಜೂರಾತಿ ಪಡೆಯಲು ಪ್ರಯತ್ನಿಸಲಾಗುವುದು. ಆದಷ್ಟು ಶೀಘ್ರವಾಗಿ ಯೋಜನೆಯನ್ನು ಪೂರ್ಣಗೊಳಿಸಿ ಪರಿಸರದ ಜನತೆಯ, ರೈತರ ಮೂರು ದಶಕಗಳ ಕನಸನ್ನು ನನಸುಗೊಳಿಸಲಾಗುವುದು. ಇದರೊಂದಿಗೆ ಏತ ನೀರಾವರಿಯನ್ನೂ ಅನುಷ್ಠಾನಗೊಳಿಸಲು ಪ್ರಯತ್ನಿ ಸಲಾಗುವುದು ಎಂದವರು ತಿಳಿಸಿದರು.
ಕಸ್ತೂರಿ ರಂಗನ್ ವರದಿಯ ಕುರಿತಂತೆ ಕೇಂದ್ರ ಸರಕಾರ ಹೊಸದಾಗಿ ಮತ್ತೆ ನೋಟಿಫೈ ಮಾಡಿದೆ. ಈ ಹಿಂದೆ ವರದಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದಂತೆ ಜನವಸತಿ ಪ್ರದೇಶಗಳನ್ನು ವರದಿಯಿಂದ ಹೊರಗಿಡುವ ಕುರಿತು ಕಳುಹಿಸಿದ ವರದಿಯನ್ನು ಮತ್ತೆ ಕೇಂದ್ರಕ್ಕೆ ಕಳುಹಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದರು.
ಕುಮ್ಕಿ ಭೂಮಿಯ ಕುರಿತಂತೆ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಅದು ಸರಕಾರಿ ಭೂಮಿಯಾಗಿದೆ. ಇದರಿಂದ ಅಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಸೊರಕೆ ನುಡಿದರು.
ಶಾಸಕ ಕೆ.ಗೋಪಾಲ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ಮಮತಾ ಆರ್.ಶೆಟ್ಟಿ, ಶಂಕರನಾರಾಯಣ ಗ್ರಾಪಂ ಸದಸ್ಯ ಕೆ.ಸದಾಶಿವ ಶೆಟ್ಟಿ, ಹಾಲಾಡಿ ಗ್ರಾಪಂ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ಸಂಜೀವ ಶೆಟ್ಟಿ, ಉಡುಪಿಯ ಮಾಜಿ ಶಾಸಕ ಯು.ಆರ್.ಸಭಾಪತಿ ಉಪಸ್ಥಿತರಿದ್ದರು.
ವಾರಾಹಿ ನೀರಾವರಿ ಯೋಜನೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಶ್ವೇಂದ್ರ ಮೂರ್ತಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಎಂಜಿನಿಯರ್ (ಪ್ರಭಾರ) ಎಂ.ವೇಣುಗೋಪಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಾರಾಹಿ: ಯೋಜನೆಗೆ ವೇಗವರ್ಧಕ
ಹೊಸಂಗಡಿ ಬಳಿ ವಾರಾಹಿ ನದಿಯ ಮೇಲ್ಭಾಗದಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಜಲ ವಿದ್ಯುತ್ ಯೋಜನೆಯನ್ನು ನಿರ್ಮಿಸಿ, ಅದರ ಟೇಲ್‌ರೇಸ್‌ನಿಂದ ಪ್ರತಿನಿತ್ಯ ಹೊರಬರುವ 1,100 ಕ್ಯೂಸೆಕ್ಸ್ ನೀರನ್ನು ಬಳಸಿ ಕೊಂಡು ಕುಂದಾಪುರ ತಾಲೂಕಿನ 33 ಗ್ರಾಮಗಳು ಹಾಗೂ ಉಡುಪಿ ತಾಲೂಕಿನ 35 ಗ್ರಾಮಗಳ ಒಟ್ಟು ಸುಮಾರು 15,072 ಹೆಕ್ಟೇರ್ ಪ್ರದೇಶಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಿ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ ಎಂದು ಮುಖ್ಯ ಎಂಜಿನಿಯರ್ ಎಂ. ವೇಣುಗೋಪಾಲ ತಿಳಿಸಿದರು.
ಇದೀಗ ಸೌಪರ್ಣಿಕ ಬ್ರಿಡ್ಜ್ ಕಂ ಬ್ಯಾರೇಜ್ ಎಂಬ ಕಾಮಗಾರಿಯನ್ನು ಸೇರಿಸಿ ಅದರ ಮೂಲಕ ಆಸುಪಾಸಿನ 11 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ 1,730 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ವಾರಾಹಿ ನೀರಾವರಿ ಯೋಜ ನೆಯಲ್ಲಿ ವಾರಾಹಿ ಡೈವರ್ಶನ್ ವಿಯರ್ ಕಾಮಗಾರಿ ಮುಗಿದಿದೆ. ಮುಖ್ಯ ಕಾಲುವೆ 63.63 ಕಿ.ಮೀ. ಇದ್ದು, ಇದರಲ್ಲಿ ಸುಮಾರು 50 ಕಿ.ಮೀ. ಮುಖ್ಯ ಕಾಲುವೆಯ ಕಾಮಗಾರಿ ಮುಗಿದಿದೆ. 8 ಕಿ.ಮೀ. ಉದ್ದಕ್ಕೆ ಟೆಂಡರ್ ಆಗಿದ್ದು, ಇನ್ನುಳಿದ 5.63 ಕಿ.ಮೀ.ಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಸರ್ವೇ ನಡೆಯುತ್ತಿದೆ ಎಂದರು.
ಬಲದಂಡೆ ಕಾಲುವೆ ಉದ್ದ 24.31 ಕಿ.ಮೀ. ಇದ್ದು ಸರ್ವೇ ಕಾರ್ಯ ಮುಗಿದಿದೆ. ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶವಿದ್ದು, ಶಂಕರನಾರಾಯಣ, ಹಳ್ನಾಡು, ಅಂಪಾರು, ಕಾವ್ರಾಡಿ ಮೂಲಕ ಹಾದು ಹೋಗುತ್ತವೆ. ಇದರ ಪ್ರಸ್ತಾವನೆ ಸಿದ್ಧವಾಗುತ್ತಿದೆ. ಹಾಲಾಡಿ-76ರಲ್ಲಿ ಪ್ರಾರಂಭಿಸಿ ವಂಡಾರು, ಹೆಗ್ಗುಂಜೆ, ಆವರ್ಸೆ, ಬಿಲ್ಲಾಡಿ, ಶಿರಿಯಾರ, ಯಡ್ತಾಡಿ, ಕಾವ್ರಾಡಿ ಮೂಲಕ ಸಾಗುವ ಏತ ನೀರಾವರಿ ಯೋಜನೆಗೆ ಸರ್ವೇ ಕಾರ್ಯ ನಡೆಯುತ್ತಿದೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News