×
Ad

ಎಂಡೋ ಸಂತ್ರಸ್ತರ ಪುನರ್ವಸತಿ ಗ್ರಾಮ ಯೋಜನೆ ಚಾಲನೆಗೆ ನಿರ್ಧಾರ

Update: 2016-01-11 00:27 IST

ಕಾಸರಗೋಡು, ಜ.10: ಎಂಡೋಸಲ್ಫಾನ್‌ಸಂತ್ರಸ್ತರ ಪುನರ್ವಸತಿ ಗ್ರಾಮ ಯೋಜನೆ ಕಾಮಗಾರಿಗೆ ಫೆಬ್ರವರಿ ಎರಡನೆ ವಾರದೊಳಗೆ ಚಾಲನೆ ನೀಡಲು ಮುಖ್ಯಮಂತ್ರಿ ಉಮ್ಮನ್ ಚಾಂಡಿಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ತಿರುವನಂತಪುರದ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂತ್ರಸ್ತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
  ಪುನರ್ವಸತಿ ಗ್ರಾಮ ಯೋಜನೆಗೆ ಈಗಾಗಲೇ 25 ಎಕರೆ ಸ್ಥಳ ಗುರುತಿಸಲಾಗಿದೆ. ಸಂತ್ರಸ್ತರ ಚಿಕಿತ್ಸೆಯ ಬಾಕಿ ಮೊತ್ತ ಸಹಿತ ಮೂರು ಕೋಟಿ ರೂ.ಗಳನ್ನು ಮಂಜೂರು ಮಾಡಲು ಸಭೆ ತೀರ್ಮಾನಿಸಿತು. ಸಂತ್ರಸ್ತರಿಗೆ ಚಿಕಿತ್ಸೆಗಾಗಿ ಪಾವತಿಸಬೇಕಾದ 1.5 ಕೋಟಿ ರೂ.ಇದರಲ್ಲಿ ಒಳಗೊಂಡಿದೆ. ಅಂಗವೈಕಲ್ಯ ಹೊಂದಿರುವ 125 ಎಂಡೋಸಂತ್ರಸ್ತರಿಗೆ 1.50 ಲಕ್ಷ ರೂ. ಮಂಜೂರು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಸಂತ್ರಸ್ತರ ಸಾಲ ಮನ್ನಾಕ್ಕೂ ಆದೇಶಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
   ಸಂತ್ರಸ್ತ ಮಕ್ಕಳ ತಾಯಂದಿರಿಗೆ ಉದ್ಯೋಗದ ಹಿತದೃಷ್ಟಿಯಿಂದ ಹೊಲಿಗೆ, ಬೇಕರಿ, ಕರಕುಶಲ ಹಾಗೂ ಇನ್ನಿತರ ಆದಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಸಂತ್ರಸ್ತ ವಲಯದಲ್ಲಿರುವ ಏಳು ಶಾಲೆಗಳೊಂದಿಗೆ ಸೇರಿಕೊಂಡು ಉದ್ಯೋಗ ಕೇಂದ್ರ ಆರಂಭಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 42 ಲಕ್ಷ ರೂ. ಮಂಜೂರು ಮಾಡಲಾಗುವುದು. ಕುಟುಂಬಶ್ರೀ ನೆರವನ್ನು ಪಡೆಯುವ ಬಗ್ಗೆಯೂ ಸಭೆ ತೀರ್ಮಾನ ತೆಗೆದುಕೊಂಡಿತು.
  ಸಭೆಯಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವ ಎಂ.ಕೆ. ಮುನೀರ್, ಕೃಷಿ ಸಚಿವ ಕೆ.ಪಿ. ಮೋಹನನ್, ಆರೋಗ್ಯ ಕಾರ್ಯದರ್ಶಿ ಡಾ. ಕೆ. ಇಳಂಗೋವನ್, ಎ. ಶಾಜಹಾನ್, ಕಾಸರಗೋಡು ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್, ಡಾ. ಮುಹಮ್ಮದ್ ಆಸಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News